ತುಮಕೂರಿನಲ್ಲಿ ಮಗಳ ಜೊತೆ ಮನೆ ಮುಂದೆ ಕುಳಿತಿದ್ದ ಮಂಜುನಾಥ್ ಎಂಬ ವ್ಯಕ್ತಿಯನ್ನು ಅಪರಿಚಿತ ಮುಸುಕುಧಾರಿಗಳು ಕೊಲೆಗೈದು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸಿದ್ದಾರೆ.
ತಮಿಳುನಾಡಿನ ಸತೀಶ, ಕೇಶವನ್, ಕವಿತೇಶ್ವರನ್ ಹಾಗೂ ಅರುಣ್ ಬಂಧಿತ ಆರೋಪಿಗಳಾಗಿದ್ದು, ಬೆಂಗಳೂರಿನ ಆನೇಕಲ್ ಭಾಗದ ಅತ್ತಿಬೆಲೆಯ ನಿವಾಸಿಗಳು. ರಾಜ್ಯದ ಹಲವೆಡೆ ಕಳ್ಳತನ ಮಡಿರುವ ಈ ಆರೋಪಿಗಳು ಚಿಕ್ಕನಾಯಕನಹಳ್ಳಿಯ ಕೆಂಕೆರೆಗೆ ಬಂದು ಮಂಜುನಾಥ್ ಮನೆಯ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಜನವರಿ 11 ರಂದು ರಾತ್ರಿ ಕೈಗೆ ಗ್ಲೌಸ್ ಮುಖಕ್ಕೆ ಮಾಸ್ಕ್ ಧರಿಸಿ ಬಂದು ಗೇಟ್ ಬಳಿ ಮಗಳ ಜೊತೆ ನಿಂತಿದ್ದ ಮಂಜುನಾಥ್‌ಗೆ ಬಾಗಿಲು ತೆರೆಯಲು ಹೇಳಿದ್ದರು. ತೆಗೆಯದಿದ್ದಾಗ ಇರಿದು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿದ್ದ ಹುಳಿಯಾರು ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದರು. ಶಿವಮೊಗ್ಗದ ವಿನೋಭನಗರ ಪೊಲೀಸರಿಗೆ ಬೇಕಾದ ಕಳ್ಳರ ಗ್ಯಾಂಗ್ನ ಕಾರು ಕೊಲೆ ನಡೆದ ಊರಿನಲ್ಲಿ ಓಡಾಡಿದ್ದ ಮಾಹಿತಿ ಲಭ್ಯವಾಗಿತ್ತು.
ಅದೇ ಕಾರು ಶಿರಾ ತಾಲೂಕಿನ ಮನೆಗಳ್ಳತನಕ್ಕೂ ಬಳಕೆಯಾಗಿತ್ತು. ಕಾರನ್ನು ಹಿಂಬಾಲಿಸಿದ ಪೊಲೀಸರಿಗೆ ಬೆಂಗಳೂರಿನ ಅತ್ತಿಬೆಲೆಯಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರು ಅಂತರರಾಜ್ಯ ಕಳ್ಳರಾಗಿದ್ದು, ರಾಜ್ಯದ ಹಲವು ಕಡೆ ಕಳ್ಳತನ ಮಾಡಿದ್ದಲ್ಲದೆ, 2018ರಲ್ಲಿ ಆನೇಕಲ್ ಬಳಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವುದೂ ತಿಳಿದು ಬಂದಿದೆ. ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದು ಹುಳಿಯಾರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


