ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ದೇಶದಿಂದ ಪಲಾಯನ ಮಾಡಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇಡಿ) ಚೋಕ್ಸಿ ಮಗ ರೋಹನ್ ಚೋಕ್ಸಿ ಕೂಡ ಅಕ್ರಮ ಹಣ ವರ್ಗಾವಣೆಯಲ್ಲಿ ಸಕ್ರಿಯ ಭಾಗಿ ಎಂದು ದೆಹಲಿಯ ವಿಚಾರಣಾ ನ್ಯಾಯಮಂಡಳಿ ಎದುರು ಹೇಳಿಕೆ ದಾಖಲಿಸಿದೆ.
ಆದರೆ ರೋಹನ್ ಚೋಕ್ಸಿ ಹೆಸರು ಸಿಬಿಐ ಅಥವಾ ಇಡಿ ನೋಂದಾಯಿಸಿರುವ ಯಾವುದೇ ಎಫ್‌ಐಆರ್‌ನಲ್ಲಿ ಇಲ್ಲ, ಯಾವುದೇ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿಲ್ಲ.
ನ್ಯಾಯಮಂಡಳಿಯ ಮುಂದೆ ಲಿಖಿತ ಹೇಳಿಕೆ ಸಲ್ಲಿಸಿರುವ ಇಡಿ, “ಮೆಹುಲ್ ಚೋಕ್ಸಿ ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದ್ದ ಹಲವು ಕಂಪನಿಗಳಿಗೆ ನಿರ್ದೇಶಕರಾಗಿದ್ದರು. ಈ ನಕಲಿ ಕಂಪನಿಗಳನ್ನು ವಹಿವಾಟುಗಳ ತೋರಿಕೆಗಾಗಿ ಮತ್ತು ಅಕ್ರಮ ಆದಾಯ ವರ್ಗಾವಣೆ ಮಾಡುವುದಕ್ಕಾಗಿ ಸ್ಥಾಪಿಸಲಾಗಿದೆ. ಈ ಕಂಪನಿಗಳು ಯಾವುದೇ ಖರೀದಿ ಅಥವಾ ಸರಕುಗಳ ಮಾರಾಟ ನಡೆಸಿಲ್ಲ ಎಂದು ಇಡಿ ತಿಳಿಸಿದೆ.
ಮೆಹುಲ್ ಚೋಕ್ಸಿ ನಿರ್ದೇಶಕರಾಗಿರುವ ‘ಲಸ್ಟರ್ ಇಂಡಸ್ಟ್ರೀಸ್’ ಎಂಬ ಕಂಪನಿಯಲ್ಲಿ ರೋಹನ್ ಚೋಕ್ಸಿ 99.99% ಷೇರು ಹೊಂದಿದ್ದಾರೆ. ಈ ಕಂಪನಿಯನ್ನು ವಿದೇಶಕ್ಕೆ ಹಣ ರವಾನಿಸಲು ಬಳಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.
ಏಷ್ಯನ್ ಡೈಮಂಡ್ ಆ್ಯಂಡ್ ಜ್ಯುವೆಲ್ಲರಿ ಎಫ್‌ಝಡ್‌ಇನಿಂದ ಸಿಂಗಾಪುರ ಮೂಲದ ಮೆರ್ಲಿನ್ ಲಕ್ಸರಿ ಗ್ರೂಪ್‌ಗೆ 1,27,500 ಅಮೆರಿಕನ್ ಡಾಲರ್ 91.6 ಲಕ್ಷ ರೂ.) ಮೊತ್ತ ವರ್ಗಾಯಿಸಲಾಗಿದೆ. ಏಷ್ಯನ್ ಡೈಮಂಡ್ ಆ್ಯಂಡ್ ಜ್ಯುವೆಲ್ಲರಿ ಎಫ್‌ಝಡ್‌ಇ ಕಂಪನಿಯಿಂದ ಬಂದ ಅಕ್ರಮ ಆದಾಯವನ್ನು ಈ ಕಂಪನಿಗೆ ವರ್ಗಾಯಿಸಲಾಗಿದೆ. ಮೆರ್ಲಿನ್ ಲಕ್ಸರಿ ಗ್ರೂಪ್ ಕೂಡ ಮೆಹುಲ್ ಚೋಕ್ಸಿಯ ನಿಯಂತ್ರಣದಲ್ಲಿದೆ. ಲಸ್ಟರ್ ಇಂಡಸ್ಟ್ರೀಸ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ಅದೇ ಕಂಪನಿಯಲ್ಲಿ ರೋಹನ್ ಚೋಕ್ಸಿ 99.99% ಪಾಲನ್ನು ಹೊಂದಿರುವುದರಿಂದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಡಿ ವಿವರಿಸಿದೆ.
ದಾಖಲೆಯಲ್ಲಿರುವ ಮಾಹಿತಿಗಳು ರೋಹನ್ ಚೋಕ್ಸಿ ತನ್ನ ತಂದೆಯೊಂದಿಗೆ ಅಕ್ರಮ ಹಣ ವರ್ಗಾವಣೆ ಅಪರಾಧದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟಪಡಿಸುತ್ತದೆ. ರೋಹನ್ ಚೋಕ್ಸಿಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ತನಿಖಾ ಸಂಸ್ಥೆ ವಾದಿಸಿದೆ.
ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಮತ್ತು ಸೋದರಳಿಯ ನೀರವ್ ಮೋದಿ ಪ್ರಮುಖ ಆರೋಪಿಗಳಾಗಿದ್ದು, ಅವರ ವಿರುದ್ಧ ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿವೆ. ಇವರಿಬ್ಬರೂ ಮುಂಬೈನಲ್ಲಿರುವ ಪಿಎನ್‌ಬಿ ಬ್ರಾಡಿ ಹೌಸ್ ಶಾಖೆಯಲ್ಲಿ ಅಧಿಕಾರಿಗಳಿಗೆ ಲಂಚ ನೀಡಿ ಬ್ಯಾಂಕ್‌ನಿಂದ 13,000 ಕೋಟಿ ರೂ.ಗಳಿಗೂ ಹೆಚ್ಚು ಹಣ ಸಾಲ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.


