ಎಂಟು ವರ್ಷಗಳಿಂದ ಗಂಡನಿಂದ ದೂರವಾಗಿ ಮೂರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಮಹಿಳೆ ಅನ್ಯ ಧರ್ಮದ ಯುವಕನೊಂದಿಗೆ ಸಂಬಂಧ ಬೆಳೆಸಿ, ಆತನಿಂದಲೇ ಕೊಲೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಚಾಪಲಗಡ್ಡದಲ್ಲಿ ನಡೆದಿದೆ.
ಗಂಡನಿಂದ ದೂರವಾಗಿದ್ದ ಉಮಾ (32) ಎಂಬಾಕೆ ರೈಲ್ವೆ ಸ್ಟೇಷನ್ನಲ್ಲಿ ಸ್ಟಾಲ್‌ವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅಲ್ಲಿ ಯುವಕನೊಬ್ಬನ ಪರಿಚಯವಾಗಿ ಸಲುಗೆಗೆ ತಿರುಗಿ ಯಾರಿಗೂ ಗೊತ್ತಾಗದ ಹಾಗೆ ನಾಲ್ಕು ತಿಂಗಳ ಹಿಂದೆ ಮದುವೆ ಆಗಿದ್ದರು ಎನ್ನಲಾಗಿದೆ.
ಉಮಾ ತವರೂರು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಚಾಪಲಗಡ್ಡದಲ್ಲಿ ವಾಸವಾಗಿದ್ದರು. ನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಉಮಾಗೆ ವಸ್ತುಪ್ರದರ್ಶನದಲ್ಲಿ ಕೆಲಸ ಮಾಡುತ್ತಿದ್ದ ಖಾಜಾ ಎಂಬಾತನ ಪರಿಚಯವಾಗಿದೆ. ಪರಿಚಯದ ನಂತರ ಆತ ದಿನವು ಉಮಾ ಕೆಲಸ ಮಾಡುತ್ತಿದ್ದ ಸ್ಟಾಲ್ ಹತ್ತಿರ ನಿಲ್ಲುವುದು, ಅವರನ್ನು ಮಾತನಾಡಿಸುವುದು ಮಾಡುತ್ತಿದ್ದ. ಬಳಿಕ ಇಬ್ಬರು ಫೋನ್ ನಂಬರ್ ಬದಲಾಯಿಸಿಕೊಂಡಿದ್ದಾರೆ. ಬಳಿಕ ಇಬ್ಬರೂ ವಾಟ್ಸಾಪ್ ಚಾಟಿಂಗ್, ಫೋನ್ ಕಾಲಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಇದು ಉಮಾಳ ಮನೆಯಲ್ಲೂ ಗೊತ್ತಿತ್ತು. ಪ್ರಶ್ನಿಸಿದರೆ ಅವನು ಅಂತಾ, ಅವನು ನನ್ನ ಫ್ರೆಂಡ್ ಎಂದು ಉಮಾ ಹೇಳಿದ್ದಾರೆ.
ಹೀಗೆ ಖಾಜಾನ ಪ್ರೀತಿಸಲು ಆರಂಭಿಸಿದ ಉಮಾ ಮನೆ-ಮಕ್ಕಳು ಎಲ್ಲವನ್ನ ಮರೆತು ಮೂರೂ ಹೊತ್ತು ಆತನ ಜೊತೆಗೆ ಮಾತು, ಚಾಟಿಂಗ್, ಡೇಟಿಂಗ್‌ನಲ್ಲೇ ಕಾಲ ಕಳೆಯುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಮನೆಯವರಿಗೆ ಹೇಳದೆ ಮದುವೆ ಆಗಿದ್ದರು ಎಂದು ಹೇಳಲಾಗಿದೆ.
ಬಳಿಕ ಹಣದ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಜಗಳ ಆರಂಭವಾಗಿದೆ. ಆತ ಆಕೆಯ ಮೇಲೆ ಅನುಮಾನ ಪಡಲಾರಂಭಿಸಿದ್ದ. ಉಮಾ ಮನೆಗೆ ಯಾವತ್ತು ಖಾಜಾ ಬರುತ್ತಿರಲಿಲ್ಲ, ಇಬ್ಬರೂ ಹೊರಗೆ ಭೇಟಿ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಹಣಕಾಸು, ಅನುಮಾನನ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆಯಾದ ಬಳಿಕ ಬೆಳಗಿನ ಜಾವ ಉಮಾಳ ಮನೆ ಹತ್ತಿರಕ್ಕೆ ಖಾಜಾ ಬಂದಿದ್ದಾನೆ. ಉಮಾ ಮನೆ ಪಕ್ಕದ ಮನೆಯ ಮಹಡಿಗೆ ಹೋಗಿ ಇಬ್ಬರೂ ಮಾತನಾಡಿದ್ದರು. ಖಾಜಾ ಹರಿತವಾದ ಚಾಕು ತಂದಿದ್ದ. ಮುಖಕ್ಕೆ ಟವೆಲ್ ಹಾಕಿ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ಉಮಾ ಸ್ಥಳದಲ್ಲೇ ಮೃತಪಟ್ಟಿದ್ದರು.
ಉಮಾ ಬೆಳಗಿನ ಜಾವ ಮನೆಯಿಂದ ಆಚೆ ಹೋದವಳು ವಾಪಸ್ ಮನೆಗೆ ಬಂದಿಲ್ಲ ಎಂದು ಮನೆ ಮಂದಿ ಹುಡುಕಾಡಿದ್ದಾರೆ. ಆದರೆ ಪ್ರಯೋಜವಾಗಿಲ್ಲ. ಮನೆ ಪಕ್ಕದಲ್ಲಿ ಬೆಕ್ಕುಗಳ ಕಾದಾಟ ಮಾಡುತ್ತಿದ್ದವು. ಬೆಕ್ಕುಗಳು ಯಾಕಿಷ್ಟು ಕಾದಾಡುತ್ತಿವೆ ಎಂದು ಮನೆ ಮಹಡಿ ನೋಡಲು ಹೋಗಿದ್ದ ಪಕ್ಕದ ಮನೆಯವರಿಗೆ ಉಮಾ ಮೃತದೇಹ ಕಂಡಿದೆ. ಚಿತ್ತವಾಡ್ಗಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಕೊಲೆ ಮಾಡಿದ್ದ ಖಾಜಾ ಹೊಸಪೇಟೆ ನಗರದಲ್ಲಿ ತಲೆ ಮರೆಸಿಕೊಂಡಿದ್ದ. ಉಮಾಳ ಮೊಬೈಲ್ ಚೆಕ್ ಮಾಡಿ ಕೊನೆಯ ಕಾಲ್ ನಂಬರ್ ನೋಡಿ ಟವರ್ ಟ್ರೇಸ್ ಮಾಡಿದ್ದು, ನಾಲ್ಕು ಗಂಟೆಯಲ್ಲಿ ಆರೋಪಿ ಖಾಜಾನನ್ನು ಪೊಲೀಸರು ಬಂಧಿಸಿದ್ದಾರೆ.


