ಬೆಂಗಳೂರು: ಬೆಸ್ಕಾಂ ಸೇರಿದಂತೆ ಕೆಪಿಟಿಸಿಎಲ್ ನ ವಿವಿಧ ವಿಭಾಗಗಳಲ್ಲಕರ್ತವ್ಯ ನಿರ್ವಹಿಸುತ್ತಿರುವ ಆರುನೂರಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಬಿಡದಿಯ ತಮ್ಮ ತೋಟದ ಮನೆಯಲ್ಲಿ ತಮ್ಮೊಂದಿಗೆ ಸಂಕ್ರಾಂತಿ ಆಚರಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಭಾವುಕರಾದರು.
ಕಳೆದ ಏಳು ವರ್ಷಗಳಿಂದ ತಮ್ಮಲ್ಲಿಗೆ ಬಂದು ಸಂಕ್ರಾಂತಿ ಆಚರಿಸುತ್ತಿರುವ ಎಲ್ಲಾ ವಿಕಲಚೇತನ ಕುಟುಂಬ ಸದಸ್ಯರನ್ನು ಬಹಳಷ್ಟು ಹೊತ್ತು ಭೇಟಿಯಾದ ಸಚಿವರಿಜ್ ಅವರೊಂದಿಗೆ ಹಬ್ಬವನ್ನು ಆಚರಿಸಿದರು. ಅಲ್ಲದೆ, ಅವರೆಲ್ಲರ ಜತೆ ಎಳ್ಳುಬೆಲ್ಲ ಸೇವಿಸಿ ಸಂತಸ ವ್ಯಕ್ತಪಡಿಸಿದರು.
ವಿಕಲಚೇತನ ಉದ್ಯೋಗಿಗಳು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸತತ 7ನೇ ವರ್ಷದ ಸಂಕ್ರಾಂತಿ ಹಬ್ಬ ಆಚರಿಸಿದರಲ್ಲದೆ, ತಮ್ಮ ತಂದೆ ತಾಯಿ, ಮಕ್ಕಳ ಸಮೇತ ಬಂದು ಸಚಿವರಿಗೆ ಎಳ್ಳುಬೆಲ್ಲ ತಿನಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಷ್ಟು ಕುಟುಂಬಗಳನ್ನು ಕಂಡು ತೀವ್ರ ಭಾವುಕರಾದ ಸಚಿವರು, ವಿಶೇಷವಾಗಿ ಮಕ್ಕಳ ಜತೆ ಬಹಳ ಸಮಯ ಕಳೆದರು. “ನಿಮ್ಮನ್ನು ನೋಡುತ್ತಿದ್ದರೆ ನನ್ನ ಹೃದಯ ತುಂಬಿ ಬರುತ್ತಿದೆ. ದೇವರು ಕೊಟ್ಟ ಸಣ್ಣ ಅವಕಾಶದಲ್ಲಿ ನಿಮಗೆ ಸಹಾಯ ಮಾಡುವ ಅವಕಾಶ ಸಿಕ್ಕಿತು. ಅದನ್ನೇ ನೀವೆಲ್ಲರೂ ಹೃದಯದಲ್ಲಿ ಇಟ್ಟುಕೊಂಡು ನನ್ನ ಮೇಲೆ ಪ್ರೀತಿ, ವಾತ್ಸಲ್ಯ ತೋರುತ್ತಿರುವುದು ನನ್ನ ಜೀವನಕ್ಕೆ ಸಾರ್ಥಕತೆ ತಂದಿದೆ” ಎಂದು ಸಚಿವರು ಹೇಳಿದರು.
ಸಚಿವರ ಕಣ್ಣಲ್ಲಿ ನೀರು ತುಂಬಿಕೊಂಡಿದ್ದನ್ನು ಕಂಡ ಎಲ್ಲರೂ ಕ್ಷಣಕಾಲ ಸ್ತಬ್ಧರಾದಲ್ಲದೇ, ನಮಗೆ ನಿಮ್ಮ ಆರೋಗ್ಯ ಮುಖ್ಯ. ಸದಾಕಾಲ ನೀವು ಆರೋಗ್ಯವಂತರಾಗಿ ಇರಬೇಕು ಎಂದು ಹಾರೈಸಿದರು.
ನಿಮ್ಮ ಜೀವನ ಎಲ್ಲರಿಗೂ ಮಾದರಿ. ಶ್ರಮ ವಹಿಸಿ ಕೆಲಸ ಮಾಡುತ್ತೀರಿ. ಸರ್ಕಾರ ನೀಡುವ ಸಂಬಳದಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದೀರಿ. ನಿಮ್ಮ ಜೀವನ, ಬೆಳವಣಿಗೆ ಸಮಾಜಕ್ಕೆ ಮಾದರಿ. ನೀವು, ನಿಮ್ಮ ಕುಟುಂಬಗಳು, ನಿಮ್ಮ ಮಕ್ಕಳು ಇನ್ನೂ ಎತ್ತರದ ಸಾಧನೆ ಮಾಡಬೇಕು ಎಂದು ಸಚಿವರು ವಿಕಲಚೇತನ ಕುಟುಂಬ ಸದಸ್ಯರಿಗೆ ಶುಭ ಹಾರೈಸಿದರು.


