“ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ. ನಾನು ರಾಜಕಾರಣದಲ್ಲಿ ಇದ್ದೇನೆ. ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಎಂದು ಜನತೆಯ ಆಶಯದ ಮೇರೆಗೆ ತೀರ್ಮಾನ ಮಾಡುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು, ನಾವು ಎನ್ಡಿಎ ಮೈತ್ರಿಯಲ್ಲಿದ್ದೇವೆ. ಈ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ನಮ್ಮ ಉದ್ದೇಶ ರಾಜ್ಯದಲ್ಲಿ ಉತ್ತಮ ಸರ್ಕಾರ ತರಬೇಕು ಎನ್ನುವುದು. ಇದು ನನ್ನ ವೈಯಕ್ತಿಕ ಉದ್ದೇಶ ಎಂದರು.
ರಾಜ್ಯದಲ್ಲಿ ಈಗ ಆಡಳಿತ ಹೇಗೆ ನಡೆಯುತ್ತಿದೆ ಎಂದು ನಾನು ನಿರಂತರವಾಗಿ ಗಮನಿಸುತ್ತಿದ್ದೇನೆ. ಒಳ್ಳೆಯ ಸರ್ಕಾರ ಬಂದು ಜನತೆ ನೆಮ್ಮದಿಯಿಂದ ಇರಬೇಕು. ಈ ನಿಟ್ಟಿನಲ್ಲಿ ನಾಡಿನ ಜನತೆ ನಾನು ಯಾವ ಸ್ಥಾನದಲ್ಲಿ ಇರಬೇಕು ಅಂತ ತೀರ್ಮಾನ ಮಾಡಿದರೆ ಅದರಂತೆ ನಡೆಯುತ್ತೇನೆ. ಈ ವಿಷಯ ನನ್ನ ಕೈಯಲ್ಲಿ ಇಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.
“ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಅಂತ ಯಾರಾದರೂ ತಿಳಿದುಕೊಂಡಿದ್ದರೆ ತಪ್ಪು. ನಾನು ರಾಜ್ಯ ರಾಜಕಾರಣದಿಂದ ದೂರ ಸರಿಯಲ್ಲ. ರಾಜ್ಯದ ರಾಜಕಾರಣದಲ್ಲಿ ಇರುತ್ತೇನೆ. ಕೇಂದ್ರದಲ್ಲಿ ಪ್ರಧಾನಿಗಳು ಉತ್ತಮ ಜವಾಬ್ದಾರಿ ಕೊಟ್ಟಿದ್ದಾರೆ. ಎರಡು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ರಾಜ್ಯ ರಾಜಕೀಯಕ್ಕೆ ಯಾವ ಸಮಯದಲ್ಲಿ ಬರಬೇಕು ಅಂತ ತೀರ್ಮಾನ ಮಾಡುತ್ತೇನೆ. ತಪ್ಪಿಸಿಕೊಳ್ಳಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.


