ಧಾರವಾಡದ ಕುಂದಗೋಳ ಪಟ್ಟಣದಲ್ಲಿ ಶಾಲಾ ಬಾಲಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಕುಂದಗೋಳ ಪಟ್ಟಣದ ನಿಂಗರಾಜ್ ಅವಾರಿ (16) ಕೊಲೆಯಾದ ಬಾಲಕ. ಕುಂದಗೋಳ ಪಟ್ಟಣದ ಅನುದಾನಿತ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ಆತನನ್ನು ಅದೇ ಶಾಲೆಯ ಮೂವರು ಬಾಲಕರು ಸೇರಿ ಕೊಲೆ ಮಾಡಿದ್ದಾರೆ.
ನಿಂಗರಾಜ್ ಮತ್ತು ಆತನ ಕೆಲವು ಸ್ನೇಹಿತರಿಗೆ ಎರಡು ದಿನದ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಸಹಪಾಠಿಯೋರ್ವ ಎಸ್ಎಸ್ಎಲ್ಸಿ ಡ್ರಾಪ್ ಔಟ್ ಆಗಿದ್ದ ಇನ್ನಿಬ್ಬರುಸ್ನೇಹಿತರನ್ನು ಕರೆದುಕೊಂಡು ಬಂದು ಈ ಕೃತ್ಯ ಎಸಗಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಕುಂದಗೋಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೂವರು ಬಾಲಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಕೊಲೆಗೆ ಬೇರೆ ಕಾರಣಗಳಿವೆಯೇ ಎಂಬುದರ ಪತ್ತೆಗೆ ಪ್ರಯತ್ನ ಮುಂದುವರಿಸಿ ದ್ದಾರೆ.


