ಕೊಲ್ಲಂನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಇಬ್ಬರು ಹುಡುಗಿಯರು ಗುರುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವುಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿನಿಯರನ್ನು ಕೋಝಿಕ್ಕೋಡ್ ಜಿಲ್ಲೆಯ 17 ವರ್ಷದ ಸಾಂಡ್ರಾ ಹಾಗೂ ತಿರುವನಂತಪುರಂ ಜಿಲ್ಲೆಯ 15 ವರ್ಷದ ವೈಷ್ಣವಿ ಎಂದು ಗುರುತಿಸಲಾಗಿದೆ. ಮೃತ ಸಾಂಡ್ರಾ ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿದ್ದು, ಪ್ಲಸ್ ಟು(ದ್ವಿತೀಯ ಪಿಯುಸಿ) ವಿದ್ಯಾರ್ಥಿನಿ. ವೈಷ್ಣವಿ 10 ನೇ ತರಗತಿಯಲ್ಲಿ ಓದುತ್ತಿದ್ದು, ಕಬಡ್ಡಿ ಆಟಗಾರ್ತಿಯಾಗಿದ್ದರು.
ಪ್ರತಿದಿನ ಬೆಳಗಿನ ಜಾವ ನಡೆಯುವ ಕ್ರೀಡಾ ತರಬೇತಿ ಸಮಯಕ್ಕೆ ಹುಡುಗಿಯರು ಅಲ್ಲಿ ಬಂದಿರಲಿಲ್ಲ, ಅಧಿಕಾರಿಗಳು ಹೋಗಿ ಪರಿಶೀಲಿಸಿದಾಗ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರೂ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ.
ಮೃತ ವೈಷ್ಣವಿ ಸಾಂಡ್ರಾ ಬೇರ ಬೇರೆ ಕೋಣೆಯಲ್ಲಿ ವಾಸಿಸುತ್ತಿದ್ದರು, ಬುಧವಾರ ರಾತ್ರಿ ವೈಷ್ಣವಿ ಸಾಂಡ್ರಾ ಅವರ ಕೋಣೆಯಲ್ಲಿ ಉಳಿದಿದ್ದರು. ಬೆಳಗ್ಗೆ ಹಾಸ್ಟೆಲ್‌ನ ಇತರರು ಇಬ್ಬರನ್ನೂ ನೋಡಿದ್ದಾರೆ. ಕೊಲ್ಲಂ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ, ಸಾವಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ.


