ಯುವಕನೊಬ್ಬ ಪ್ರೀತಿ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದ ಬಳಿಕ ವಿವಾಹವಾಗಲು ನಿರಾಕರಿಸಿದ್ದರಿಂದ ನೊಂದ ಯುವತಿ ಡೆತ್ ನೋಟ್ ಬರೆದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರ ಮಹಿಳಾ ಪೊಲೀಸ್ ಠಾಣೆ ಸಮೀಪ ಘಟನೆ ನಡೆದ ಕಾರಣ ಸಮಯಕ್ಕೆ ಸರಿಯಾಗಿ ಗಮನಿಸಿದ ಪೊಲೀಸರು ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಯುವತಿ ಕನಕಪುರ ತಾಲೂಕಿನ ಗಟ್ಟಿಗುಂದ ಗ್ರಾಮದ ನಿವಾಸಿ. ಆಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷಗಳಿಂದ ಕನಕಪುರ ತೆರಿಗೆದೊಡ್ಡಿ ಗ್ರಾಮದ ಅರುಣ್ ನಾಯ್ಕ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು.
ಪ್ರೀತಿಯ ಹೆಸರಿನಲ್ಲಿ ಅರುಣ್ ನಾಯ್ಕ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ ವಿವಾಹವಾಗಲು ನಿರಾಕರಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರಕ್ಕೆ ಎರಡು ತಿಂಗಳಿಂದ ಇಬ್ಬರ ನಡುವೆ ರಾಜಿ ಸಂಧಾನಕ್ಕೂ ಪ್ರಯತ್ನ ನಡೆದಿದ್ದತ್ತು, ಆದರೆ ಯುವಕ ಸ್ಪಂದಿಸದ ಕಾರಣ ಯುವತಿ ಆತ್ಮಹತ್ಯೆಗೆ ಮುಂದಾಗಿದ್ದಾಳೆ ಎನ್ನಲಾಗಿದೆ.


