ಸಾಲ ತೀರಿಸಲು ತನ್ನ ಮಾನಸಿಕವಾಗಿ ಅಪ್ರಬುದ್ಧ ಸಹೋದರನ ಹೆಸರಿನಲ್ಲಿ ವಿಮೆ ಮಾಡಿಸಿ, ಬಳಿಕ ಕ್ರೂರವಾಗಿ ಕೊಂದು ಅಪಘಾತ ಎಂದು ತಮ್ಮ ಬಿಂಬಿಸಿದ ಆಘಾತಕಾರಿ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ರಾಮದುಗು ತಾಲೂಕಿನಲ್ಲಿ ನಡೆದಿದೆ.
ವಿಮಾ ಕಂಪನಿ ಪ್ರತಿನಿಧಿಗಳು ನೀಡಿದ್ದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಪ್ರಮುಖ ಆರೋಪಿ ತಮ್ಮರಾಮದುಗುವಿನ ಪ್ರಮುಖ ಆರೋಪಿ ಮಾಮಿಡಿ ನರೇಶ್ (30), ಟಿಪ್ಪರ್ ಚಾಲಕ ಪ್ರದೀಪ್ (29) ಹಾಗೂ ಮತ್ತೋರ್ವ ನಮುಂಡ್ಲಾ ರಾಕೇಶ್ (28) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ನರೇಶ್ ಮೂರು ವರ್ಷಗಳ ಹಿಂದೆ ಎರಡು ಟಿಪ್ಪರ್‌ಗಳನ್ನು ಖರೀದಿಸಿ, ಬಾಡಿಗೆಗೆ ನೀಡಿದ್ದ. ಆದರೆ ಕೆಲ ಸಮಯದಿಂದ ವ್ಯವಹಾರದಲ್ಲಿ ನಷ್ಟವಾಗಿ, ಇಎಂಐ ಪಾವತಿಸಲಾಗದೆ ಪರದಾಡುತ್ತಿದ್ದ. ಅಲ್ಲದೆ, ಪರಿಚಯಸ್ಥರಿಂದ ಸಾಲ ಪಡೆದುಕೊಂಡಿದ್ದ ಈತ ಷೇರು ಮಾರುಕಟ್ಟೆಯಲ್ಲಿಯೂ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದ. ಹೀಗಾಗಿ, ಒಟ್ಟಾರೆ ಸುಮಾರು 1.50 ಕೋಟಿ ರೂ. ಸಾಲ ಮಾಡಿಕೊಂಡಿದ್ದ. ಸಾಲದ ಸುಳಿಯಿಂದ ಹೊರಬರಲು ತನ್ನ ಅವಿವಾಹಿತ ಅಣ್ಣ ವೆಂಕಟೇಶ್ (37)ನನ್ನೇ ಕೊಲ್ಲಲು ಸಂಚು ರೂಪಿಸಿದ್ದ ಎಂದು ಕರೀಂನಗರ ಪೊಲೀಸ್ ಆಯುಕ್ತ ಗೌಶ್ ಆಲಂ ಮಾಹಿತಿ ನೀಡಿದರು.
ಸಿಕ್ಕಿಬಿದ್ದರೆ ಮೂವರೂ ಶಿಕ್ಷೆ ಅನುಭವಿಸಬೇಕು ಎಂದು ಒಪ್ಪಂದ: ಎರಡು ತಿಂಗಳ ಹಿಂದೆ, ವೆಂಕಟೇಶ್ ಹೆಸರಲ್ಲಿ ನಾಲ್ಕು ಖಾಸಗಿ ವಿಮಾ ಕಂಪನಿಗಳು ಮತ್ತು ಸರ್ಕಾರಿ ವಿಮಾ ಕಂಪನಿಗಳಿಂದ ಪ್ರತ್ಯೇಕವಾಗಿ 4.14 ಕೋಟಿ ರೂ. ವಿಮೆ ಮಾಡಿಸಲಾಗಿತ್ತು. ಈ ನಡುವೆ, ಆರೋಪಿ ನಮುಂಡ್ಲಾ ರಾಕೇಶ್ ತನಗೆ ಬರಬೇಕಾದ 7 ಲಕ್ಷ ರೂ. ನೀಡುವಂತೆ ನರೇಶ್ ಮೇಲೆ ಒತ್ತಡ ಹೇರುತ್ತಿದ್ದ. ಆಗ, ತನ್ನ ಸಹೋದರನನ್ನು ಕೊಲ್ಲಲು ಮುಂದಾಗಿದ್ದೇನೆ, ನೀನು ಸಹಕರಿಸಿದರೆ ನಿನಗೆ ಕೊಡಬೇಕಾದ 7 ಲಕ್ಷದ ಜೊತೆಗೆ 13 ಲಕ್ಷ ರೂ. ನೀಡುವುದಾಗಿ ರಾಕೇಶ್ಗೆ ಹೇಳಿದ್ದ. ಅಲ್ಲದೆ, ಟಿಪ್ಪರ್ ಚಾಲಕ ಪ್ರದೀಪ್ಗೆ 2 ಲಕ್ಷ ರೂ. ಕೊಡುವುದಾಗಿ ಕೊಲೆ ಮಾಡಲು ಮನವೊಲಿಸಲಾಗಿತ್ತು. ಒಂದು ವೇಳೆ, ಸಿಕ್ಕಿಬಿದ್ದರೆ ಮೂವರೂ ಶಿಕ್ಷೆ ಅನುಭವಿಸಬೇಕು ಎಂದು ಆರೋಪಿಗಳು ಒಪ್ಪಂದದ ಸಮಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು.
ಟಿಪ್ಪರ್ ಹತ್ತಿಸಿ ಕೊಲೆ:
ಸಂಚಿನ ಪ್ರಕಾರ, ಕಳೆದ ನವೆಂಬರ್ 29ರ ರಾತ್ರಿ, ಚಾಲಕ ಪ್ರದೀಪ್ ನರೇಶ್‌ಗೆ ಕರೆ ಮಾಡಿ, ಟಿಪ್ಪರ್ ಗ್ರಾಮದ ಹೊರವಲಯದಲ್ಲಿ ಕೆಟ್ಟುನಿಂತಿದೆ ಎಂದು ಹೇಳಿದ್ದಾನೆ. ಆಗ ಆತ ತನ್ನ ಅಳಿಯ ಸಾಯಿ ಹಾಗೂ ಸಹೋದರ ವೆಂಕಟೇಶ್ನನ್ನು ಬೈಕಿನಲ್ಲಿ ಟಿಪ್ಪರ್ ಇರುವಲ್ಲಿಗೆ ಕಳುಹಿಸಿದ್ದಾನೆ. ಬಳಿಕ ನರೇಶ್ ಕೂಡ ಹಿಂಬಾಲಿಸಿದ್ದ. ಬಳಿಕ ಎಲ್ಲರೂ ಸೇರಿ ಟಿಪ್ಪರ್ ಟೈರ್ಗೆ ಜಾಕ್ ಹಾಕಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ವೆಂಕಟೇಶ್ ವಾಹನದ ಅಡಿಭಾಗದಲ್ಲಿ ಮಲಗಿದ್ದಾಗ, ನರೇಶ್ ಟಿಪ್ಪರ್ ಅನ್ನು ಮುಂದಕ್ಕೆ ಓಡಿಸಿದ್ದಾನೆ. ಇದರಿಂದ ವೆಂಕಟೇಶ್ ಟೈರ್‌ಗಳ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹೀಗೆ, ಇದೊಂದು ಅಪಘಾತ ಎಂಬುವಂತೆ ಬಿಂಬಿಸಿದ್ದ ಆರೋಪಿಗಳು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.
ವಿಮಾ ಕಂಪನಿಯವರ ಅನುಮಾನದಿಂದ ಪ್ರಕರಣ ಬಯಲಿಗೆ: ನ.30ರಂದು ವಿಮಾ ಕಂಪನಿಯ ಪ್ರತಿನಿಧಿಗಳು ಬಂದಾಗ, ಘಟನೆಯ ಬಗ್ಗೆ ನರೇಶ್ ವಿವರಿಸಿದ ರೀತಿಯ ಬಗ್ಗೆ ಅನುಮಾನ ಮೂಡಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ವಿಮೆ ಹಣದ ಸಂಚಿನ ಕೊಲೆ ಪ್ರಕರಣ ಬಯಲಾಗಿದೆ.
ವೆಂಕಟೇಶ್ ಇತ್ತೀಚೆಗೆ 4.14 ಕೋಟಿ ರೂ. ವಿಮೆ ಮಾಡಿಸಿರುವುದು ಹಾಗೂ ನರೇಶ್ ಮಾಡಿಕೊಂಡಿರುವ ಕೋಟಿಗಟ್ಟಲೆ ಸಾಲದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು. ಮೊಬೈಲ್ ಫೋನ್ ಪರಿಶೀಲಿಸಿದಾಗ, ಕೊಲೆ ಪ್ಲಾನ್ ರೂಪಿಸುವಾಗ ರೆಕಾರ್ಡ್ ಮಾಡಿದ್ದ ವಿಡಿಯೋ ದೊರೆತಿತ್ತು. ಅದರ ಆಧಾರದ ಮೇಲೆ, ನರೇಶ್, ರಾಕೇಶ್ ಮತ್ತು ಪ್ರದೀಪ್ರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಗೌಶ್ ಆಲಂ ವಿವರಿಸಿದರು.


