ಬೆಳಗಾವಿ: ಬೆಳಗಾವಿಯಲ್ಲೂ ಖತರ್ನಾಕ್ ಕಳ್ಳರ ಗ್ಯಾಂಗೊಂದು ಎಟಿಎಂ ಯಂತ್ರವನ್ನೇ ತಳ್ಳುಗಾಡಿಯ ಸಹಾಯದಿಂದ ಹೊತ್ತೊಯ್ದು ಘಟನೆ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48 ರ ಪಕ್ಕದಲ್ಲಿದ್ದ ‘ಇಂಡಿಯಾ ಎಟಿಎಂ’ ಕೇಂದ್ರವನ್ನು ಗುರಿಯಾಗಿಸಿಕೊಂಡು ಈ ದರೋಡೆ ನಡೆದಿದೆ. ದರೋಡೆ ನಡೆದ ಅರ್ಧ ಕಿಲೋ ಮೀಟರ್ ದೂರದಲ್ಲಿ ಎಟಿಎಂ ಮೆಷಿನ್ ತೆರೆಯಲು ಸಾಧ್ಯವಾಗದೇ ಹಾಗೆಯೇ ಬಿಟ್ಟು ಹೋಗಿದ್ದಾರೆ.
ದರೋಡೆಯ ರಹಸ್ಯ ತಂತ್ರ
ಡಿಸೆಂಬರ್ 2ರಂದು ನಸುಕಿನ ಜಾವದಲ್ಲಿ ಕೃತ್ಯ ಎಸಗಿರುವ ಶಂಕೆಯಿದೆ. ಕಳ್ಳರು ತಮ್ಮೊಂದಿಗೆ ತಳ್ಳುಗಾಡಿ ಸಮೇತ ಎಟಿಎಂ ಕೇಂದ್ರಕ್ಕೆ ಬಂದಿದ್ದಾರೆ. ದರೋಡೆಕೋರರ ಗ್ಯಾಂಗ್‌ನಲ್ಲಿದ್ದ ಮೂವರು ಮೊದಲು ಎಟಿಎಂ ಒಳ ನುಗ್ಗಿದ್ದಾರೆ. ಯಾವುದೇ ಸೆನ್ಸಾರ್ ಅಥವಾ ಎಚ್ಚರಿಕೆಯ ಶಬ್ದ ಹೊರಹೋಗದಂತೆ ತಡೆಯಲು, ಅವರು ತಕ್ಷಣವೇ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಮೇಲೆ ಮತ್ತು ಸೆನ್ಸಾರ್‌ಗಳ ಮೇಲೆ ಬ್ಲ್ಯಾಕ್ ಸ್ಪ್ರೇ ಸಿಂಪಡಿಸಿದ್ದಾರೆ.
ಯಂತ್ರವನ್ನು ಕೇಂದ್ರದಿಂದ ಯಶಸ್ವಿಯಾಗಿ ಹೊರತೆಗೆದ ಕಳ್ಳರು, ಅದನ್ನು ತಾವು ತಂದಿದ್ದ ತಳ್ಳುಗಾಡಿಯಲ್ಲಿ ಇರಿಸಿದ್ದಾರೆ. ಹೆದ್ದಾರಿಯ ಬದಿಯಲ್ಲೇ ಸುಮಾರು 200 ಮೀಟರ್‌ಗಳಷ್ಟು ದೂರದವರೆಗೆ ಎಟಿಎಂ ಯಂತ್ರವನ್ನು ತಳ್ಳುಗಾಡಿಯಲ್ಲಿ ಸಾಗಿಸಿದ್ದಾರೆ. ನಂತರ, ಪೂರ್ವಸಿದ್ಧತೆ ಮಾಡಿಕೊಂಡಿದ್ದ ತಮ್ಮ ವಾಹನಕ್ಕೆ ಎಟಿಎಂ ಯಂತ್ರವನ್ನು ವರ್ಗಾಯಿಸಿಕೊಂಡು ಕ್ಷಣಾರ್ಧದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರಿಂದ ತೀವ್ರ ಶೋಧ
ದರೋಡೆಯಾದ ಎಟಿಎಂ ಯಂತ್ರದಲ್ಲಿ ಒಂದು ಲಕ್ಷ ರೂಪಾಯಿಗಳಿಗೂ ಅಧಿಕ ಹಣವಿತ್ತು ಎಂದು ತಿಳಿದುಬಂದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳೀಯರು ಕಾಕತಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ, ಕಾಕತಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರ ಕುರಿತು ಸೂಕ್ತ ಸುಳಿವುಗಳಿಗಾಗಿ ಹೆದ್ದಾರಿ ಮತ್ತು ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ದರೋಡೆಕೋರರ ಪತ್ತೆಗಾಗಿ ಪೊಲೀಸರು ಈಗಾಗಲೇ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.


