ದೂರುದಾರನ ಹಿನ್ನೆಲೆ ಪರಿಶೀಲಿಸದೆ ಎಸ್‌ಐಟಿ ರಚಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಪ್ಪು. ಇದರ ಹಿಂದೆ ಇರುವವರನ್ನು ಬಯಲಿಗೆಳೆಯಲು ಈಗ ಸರ್ಕಾರ ಎಸ್‌ಐಟಿ ರಚಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸುಕುಧಾರಿಗಿಂತಲೂ ಆತನ ಹಿಂದೆ ಇರುವವರನ್ನು ಪತ್ತೆ ಮಾಡಬೇಕಿದೆ. ಇದಕ್ಕೆ ವಿದೇಶದಿಂದ ಹಣ ಬಂದಿರುವ ಸಾಧ್ಯತೆ ಇದೆ. ಆದ್ದರಿಂದ ಇದನ್ನು ಎನ್‌ಐಎ ತನಿಖೆಗೆ ನೀಡುವುದು ಸೂಕ್ತ. ಇಲ್ಲವಾದರೆ ಕಾಂಗ್ರೆಸ್ ಕೂಡ ಇವರ ಜೊತೆ ಸೇರಿಕೊಂಡಿದ್ದಾರೆ ಎಂದು ಅಂದುಕೊಳ್ಳಬೇಕು. ಲವ್ ಜಿಹಾದ್‌ನಂತೆಯೇ ಇದು ಮತಾಂತರದ ಜಿಹಾದ್ ಆಗಿದೆ. ಇದರ ಹಿಂದೆ ಯಾವ ದೇಶದವರು ಇದ್ದಾರೆ ಎಂದು ಕೂಡ ತಿಳಿಯಬೇಕಿದೆ ಎಂದರು.
ಪಕ್ಕದ ರಾಜ್ಯ ತಮಿಳುನಾಡಿನವರು ಹಿಂದೂ ದೇವರ ಫೋಟೋ ಸುಡುತ್ತಾರೆ. ಅಲ್ಲಿರುವವರೂ ಇಲ್ಲಿ ಸೇರಿಕೊಂಡಿರಬಹುದು. ಕೇರಳ ಸರ್ಕಾರವಂತೂ ಈ ಬಗ್ಗೆ ನಿರ್ಣಯ ಕೈಗೊಂಡಿದ್ದು ಆ ಬಗ್ಗೆ ನಾಚಿಕೆಯಾಗಬೇಕು. ಒಬ್ಬ ಮುಸ್ಲಿಂ ಯೂಟ್ಯೂಬರ್ ದಿಢೀರನೆ ಬಂದು ವೀಡಿಯೋ ಮಾಡಿ ಅಪಪ್ರಚಾರ ಮಾಡಿದ್ದಾನೆ. ಆತನೇನೂ ಜ್ಞಾನಿಯಲ್ಲ. ಆತನನ್ನು ಮೊದಲು ಬಂಧಿಸಬೇಕು. ಆತ ಜಾಮೀನು ಕೂಡ ಪಡೆದುಕೊಂಡಿದ್ದಾನೆ. ಆದ್ದರಿಂದ ಪೊಲೀಸರು ಮೇಲ್ಮನವಿ ಸಲ್ಲಿಸಿ ಬಂಧಿಸುವ ಅವಕಾಶ ಪಡೆಯಬೇಕು ಎಂದು ಒತ್ತಾಯಿಸಿದರು.
ಧರ್ಮಸ್ಥಳದ ಪ್ರಕರಣ ಆರಂಭವಾದಾಗಿನಿಂದಲೂ ಷಡ್ಯಂತ್ರ ಇದೆ ಎಂದು ಹೇಳುತ್ತಲೇ ಇದ್ದೆ. ಈ ಮುಸುಕುಧಾರಿಯ ಹಿನ್ನೆಲೆಯನ್ನು ಕಾಂಗ್ರೆಸ್ ಸರ್ಕಾರ ಮೊದಲು ತಿಳಿದುಕೊಳ್ಳಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಗತಿಪರರ ಮಾತನ್ನು ಕೇಳಿಕೊಂಡು ಎಸ್‌ಐಟಿ ರಚಿಸಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇದರಿಂದ ಅನೇಕ ಭಕ್ತರು ಅನುಭವಿಸಿದ ನೋವನ್ನು ಶಮನಗೊಳಿಸಲು ಸಾಧ್ಯವಿಲ್ಲ. ಎಸ್‌ಐಟಿ ರಚಿಸಿ ಎಂದು ಅನೇಕ ಮನವಿಗಳು ಬರುತ್ತಲೇ ಇರುತ್ತದೆ. ಏನೇ ಮಾಡುವ ಮೊದಲು ಹಿನ್ನೆಲೆಯನ್ನು ಪರಿಶೀಲಿಸಬೇಕಿತ್ತು. ಎಸ್‌ಐಟಿ ರಚಿಸಿರುವುದರಿಂದ ಸರ್ಕಾರದ್ದೇ ತಪ್ಪು ಎಂಬುದು ಸಾಬೀತಾಗಿದೆ ಎಂದು ಹೇಳಿದರು.
ಸುಜಾತ ಭಟ್ ಹೇಳಿದ್ದೆಲ್ಲ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ಸುಜಾತ ಭಟ್ ದೂರು ನೀಡಿದಾಗಲೇ ಅವರ ಹಿನ್ನೆಲೆ ಪರಿಶೀಲಿಸಿದ್ದರೆ ಸತ್ಯ ಗೊತ್ತಾಗುತ್ತಿತ್ತು. ಇವೆಲ್ಲದರ ಹಿಂದೆ ಸಮೀರ್ ಎಂಬ ಯುವಕ ಇದ್ದಾನೆ. ಈತನ ಜೊತೆಗೆ ಪ್ರಗತಿಪರರು ಸೇರಿಕೊಂಡಿದ್ದಾರೆ. ಇವರೆಲ್ಲರೂ ಮುಸುಕುಧಾರಿಯನ್ನು ಹಿಡಿದುಕೊಂಡು ಬಂದಿದ್ದಾರೆ. ಈ ರೀತಿ ದೂರು ಕೊಡುವವರಿಗೆ ಪೊಲೀಸರು ಎಕೆ-47 ಹಿಡಿದುಕೊಂಡು ಭದ್ರತೆ ನೀಡಿದ್ದಾರೆ. ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಗೆ ಅಪಮಾನ ಮಾಡಬೇಕು, ಮತಾಂತರ ಮಾಡಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಸಮೀರ್ ಒಬ್ಬ ಮುಸ್ಲಿಂ ಆಗಿದ್ದು, ಆತನಿಗೆ ಏಕೆ ಇದರಲ್ಲಿ ಆಸಕ್ತಿ? ಅನೇಕ ಮಸೀದಿಗಳ ಮೇಲೆ ದೂರು ಬಂದಿದ್ದರೂ, ಯಾವುದೇ ಮಸೀದಿಯ ಬಳಿ ನೆಲ ಅಗೆದಿಲ್ಲ ಎಂದು ಕಿಡಿ ಕಾರಿದರು.
ಇಷ್ಟೆಲ್ಲ ಅವಾಂತರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ. ಪೊಲೀಸರು ನಿತ್ಯದ ಕೆಲಸ ಬಿಟ್ಟು ಹೆಚ್ಚುವರಿ ಕೆಲಸ ಮಾಡಿದ್ದು, ಅದರಿಂದಾದ ಹಣದ ನಷ್ಟವನ್ನು ಕಾಂಗ್ರೆಸ್ ಪಕ್ಷ ಭರಿಸಬೇಕು. ರಾಜ್ಯದ ಇತಿಹಾಸದಲ್ಲಿ ಈ ಬಗೆಯ ಪ್ರಹಸನ ನಡೆದಿಲ್ಲ. ಯಾರೋ ಒಬ್ಬ ದಾರಿಹೋಕ ಹೇಳಿದ್ದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ಎಸ್‌ಐಟಿ ರಚನೆಯಾದಾಗಲೇ ನಾನು ಪತ್ರಿಕಾಗೋಷ್ಠಿ ಮಾಡಿ ಹಿನ್ನೆಲೆ ಪರಿಶೀಲಿಸಲು ಆಗ್ರಹಿಸಿದ್ದೆ. ಬಿಜೆಪಿ ಬೀದಿಗಿಳಿದು ಹೋರಾಟ ಮಾಡಿರಲಿಲ್ಲ ಎಂದಾದರೆ ಯಾವುದೋ ಬುರುಡೆ ತಂದು ವಂಚಿಸುತ್ತಿದ್ದರು. ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಹಿಂದೂಗಳ ಪರವಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದರು.