ಲಿವ್ ಇನ್ ಟುಗೆದರ್‌ನಲ್ಲಿದ್ದ ಮಹಿಳೆಯನ್ನು ಕೊಂದ ಬಳಿಕ ವ್ಯಕ್ತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಇಂದಿರಾ ಪ್ರಿಯದರ್ಶಿನಿ ನಗರದ ಮನೆಯೊಂದರಲ್ಲಿ ನಡೆದಿದೆ. 51 ವರ್ಷದ ಲಕ್ಷ್ಮೀನಾರಾಯಣ 49 ವರ್ಷದ ಲಲಿತಾ ಎಂಬಾಕೆಯನ್ನು ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ಅಂದರೆ ಇಂದು ಮನೆಯ ಬಾಗಿಲು ತೆರೆದಿದ್ದರೂ ಯಾರು ಕಾಣಿಸದ ಕಾರಣ ಅನುಮಾನಗೊಂಡ ಪಕ್ಕದ ಮನೆಯವರು ಬಂದು ನೋಡಿದಾಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಗಂಡ ಮೃತಪಟ್ಟ ಬಳಿಕ ಲಲಿತಾ ಅವರು ಲಕ್ಷ್ಮೀ ನಾರಾಯಣ ಜೊತೆ ಸಂಬಂಧ ಹೊಂದಿದ್ದರು. ಲಕ್ಷ್ಮೀ ನಾರಾಯಣ ಪತ್ನಿಯನ್ನು ತೊರೆದು ಲಲಿತಾಳೊಂದಿಗೆ ಪ್ರತ್ಯೇಕ ಮನೆ ಮಾಡಿಕೊಂಡು ಲಿವಿಂಗ್ ರಿಲೇಷನ್ ಶಿಪ್ನಲ್ಲಿದ್ದರು. ಏಕಾಏಕಿ ಲಲಿತಾ ನಡತೆ ಬಗ್ಗೆ ಲಕ್ಷ್ಮೀ ನಾರಾಯಣ ಪ್ರಶ್ನಿಸಿ ಗಲಾಟೆ ಮಾಡಿದ್ದು, ವಿಕೋಪಕ್ಕೆ ತಿರುಗಿ ಲಕ್ಷ್ಮೀ ನಾರಾಯಣ ವೇಲ್ನಿಂದ ಲಲಿತಾಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ನಂತರ ಲಕ್ಷ್ಮೀ ನಾರಾಯಣ ಅದೇ ವೇಲ್ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪಕ್ಕದ ಮನೆಯವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ರಾಜಗೋಪಾಲನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳುನ್ನು ವಿಕ್ಟೋರಿಯಾ ಅಸ್ಪತ್ರೆಗೆ ಕಳಿಸಿದ್ದು, ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


