ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲವೊಂದು ನಿಯಮಗಳನ್ನು ಕಠಿಣವಾಗಿ ಜಾರಿಗೆ ತರುತ್ತಿದ್ದು, ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್ ಬಂದ್ ಆಗಿದೆ. ಮೊಬೈಲ್ ಕೂಡ ಸಿಗದಂತೆ ಮಾಡಲಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಜೈಲಿನಲ್ಲಿ ಕೈದಿಗಳು ಊಟ, ತಿಂಡಿ ಸರಿಐಆಗಿ ಮಾಡದೆ ಪ್ರತಿಭಟಿಸುತ್ತಿದ್ದಾರೆ. ಬೀಡಿ ಸಿಗರೇಟ್ ಕೊಡಿ ಎಂದು ಜೈಲಾಧಿಕಾರಿಗಳಲ್ಲಿ ಕೇಳುತ್ತಿದ್ದಾರೆ. ಜೈಲು ನಿಯಾಮವಳಿ ಬಗ್ಗೆ ತಿಳಿ ಹೇಳಿದರೂ ಕೈದಿಗಳು ಪಟ್ಟು ಬಿಡುತ್ತಿಲ್ಲ. ಜೈಲಿನ ಕೈಪಿಡಿ ಅನುಸಾರ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ವೀಡಿಯೊ ವೈರಲ್ ಆದ ಬಳಿಕ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಜೈಲು ಮುಖ್ಯ ಅಧೀಕ್ಷಕರಾಗಿ ಅಂಶುಕುಮಾರ್ ನೇಮಕಗೊಂಡಿದ್ದು, ಜೈಲಿನ ಅಕ್ರಮಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಹೀಗಾಗಿ ಕೈದಿಗಳಿಗೆ ಅಕ್ರಮವಾಗಿ ಬೀಡಿ, ಸಿಗರೇಟ್, ಮೊಬೈಲ್ ಸಿಗುತ್ತಿಲ್ಲ.
ಸಿಬ್ಬಂದಿಯ ಅಕ್ರಮದಿಂದ ನಿಷೇಧಿತ ವಸ್ತು ಜೈಲಿನಲ್ಲಿ ಸಿಗುತ್ತಿದ್ವು, ನಿಯಂತ್ರಿಸಲು ವಿಶೇಷ ಶೋಧ ತಂಡ ರಚನೆ ಮಾಡಲಾಗಿದ್ದು, ತಂಡ ತಪಾಸಣೆ ನಡೆಸಿ 50ಕ್ಕಿಂತ ಹೆಚ್ಚು ಮೊಬೈಲ್ ವಶಕ್ಕೆ ಪಡೆದುಕೊಂಡಿತ್ತು. ಜೈಲಿನೊಳಗೆ ಮಾರಾಟವಾಗುತ್ತಿದ್ದ ಬೀಡಿ, ಸಿಗರೇಟ್ ಗೆ ಕಡಿವಾಣ ಹಾಕಿತ್ತು. ಇದರಿಂದಾಗಿ ಕೈದಿಗಳು ಅಸಮಾಧಾನಗೊಂಡು ಊಟ ತ್ಯಜಿಸಿ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.


