Tuesday, December 02, 2025
Menu

ಡಿಸಿಎಂ ನಿವಾಸದಲ್ಲಿ ಸಿಎಂ ಬ್ರೇಕ್‌ಫಾಸ್ಟ್‌: ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷಗಳ ಎದುರಿಸಲು ರಣನೀತಿಗಳ ಚರ್ಚೆ

CM Siddaramaiah DK Shivakumar

ಬೆಳಗಿನ ಉಪಹಾರಕ್ಕಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ  ಭೇಟಿ ನೀಡಿದ್ದು,  ಈ ವೇಳೆ ಬೆಳಗಾವಿ ಅಧಿವೇಶನದಲ್ಲಿ  ಪ್ರತಿಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿಗಳ ಬಗ್ಗೆ ಚರ್ಚಿಸಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉಪಾಹಾರದ ಬಳಿಕ ಬೆಂಗಳೂರಿನಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ , ಉಪಮುಖ್ಯಮಂತ್ರಿಗಳ ಮನೆಯ ಉಪಾಹಾರದಲ್ಲಿ ಮಾಂಸಾಹಾರವಿತ್ತು, ನಮ್ಮ ಮನೆಯಲ್ಲಿ ಸಸ್ಯಾಹಾರದ ಉಪಾಹಾರವಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಈ ಭೇಟಿಯಲ್ಲಿ ಚರ್ಚಿಸಲಾಗಿದೆ. ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಪ್ರಾರಂಭವಾಗಲಿದ್ದು, ಸರ್ಕಾರ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸಲಿದೆ . ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿವೆ  ಎಂಬ ಮಾಹಿತಿ ಪತ್ರಿಕೆಗಳಿಂದ ತಿಳಿದು ಬಂದಿದೆ. ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಕಬ್ಬು, ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸಲಾಗುವುದು ಎಂದರು.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ,  ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಿನಿಂದ ಇದ್ದೇವೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಸಿಎಲ್. ಪಿ ಸಭೆ ಕರೆದಾಗ ಎಲ್ಲರೂ ಊಟಕ್ಕೆ ಸೇರುತ್ತೇವೆ. ನಾನು ಹಾಗೂ ಉಪಮುಖ್ಯಮಂತ್ರಿಗಳು ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು, ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ. 2028 ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು. ಹೈ ಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಮೊನ್ನೆ ಹಾಗೂ ಇಂದೂ ಕೂಡ ಚರ್ಚಿಸಲಾಗಿದೆ. ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರನ್ನು ನಾಳೆ ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭೇಟಿಯಾಗಲಿದ್ದೇನೆ  ಎಂದರು.

ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿವೇಶನ ನಡೆಯಲಿದೆ. ನಮ್ಮ ಸರ್ಕಾರ ರೈತಪರ ನಿಲುವನ್ನು ಹೊಂದಿದೆ. ಕಬ್ಬು ಬೆಲೆ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ರೈತರು, ರೈತ ಮುಖಂಡರು,ಕಾರ್ಖಾನೆ ಮಾಲಿಕರ ಜೊತೆ ಚರ್ಚಿಸಿ, ಸಮಸ್ಯೆಯ ಪರಿಹಾರಕ್ಕೆ ಅಂತಿಮ ರೂಪವನ್ನು ನೀಡಲಾಗಿದೆ. ಕಬ್ಬು ಒಂದು ಟನ್ ಗೆ ಸರ್ಕಾರದಿಂದ 50 ರೂ. ನಿಗದಿಪಡಿಸಲಾಗಿದೆ. ಮೆಕ್ಕೆ ಜೋಳ ಖರೀದಿಯ ಬಗ್ಗೆ ರೈತರು, ಡಿಸ್ಟಲರಿ ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2,400 ರೂ.ಗಳನ್ನು ಬೆಂಬಲ ಬೆಲೆಯಾಗಿ ನಿಗದಿಪಡಿಸಿದೆ. ಆದರೆ ಮಾರುಕಟ್ಟೆ ದರ 1900 ರಿಂದ 2100 ರೂ.ವೆರೆಗಿರುವುದರಿಂದ ಡಿಸ್ಟಲರಿ ಕಂಪನಿಗಳು , ಎಂಎಸ್ ಪಿ ದರದಲ್ಲಿಯೇ ರೈತರಿಂದ ಮೆಕ್ಕೆಜೋಳವನ್ನು ಖರೀದಿಸಬೇಕೆಂದು ಮನವೊಲಿಸಲಾಗುತ್ತಿದೆ. ಅಂತೆಯೇ ಪೌಲ್ಟ್ರಿ ಫಾರಂಗಳು , ಪಶು ಆಹಾರಗಳಿಗಾಗಿ ಮೆಕ್ಕೆ ಜೋಳವನ್ನು ಬಳಸಲಾಗುತ್ತದೆ ಎಂದು ಸಿಎಂ ತಿಳಿಸಿದರು.

ಈ ಬಾರಿ ರೈತರು ಮೆಕ್ಕೆ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ಸುಮಾರು 55 ಲಕ್ಷ ಮೆ.ಟನ್ ಉತ್ಪಾದನೆಯಾಗುವ ಅಂದಾಜಿದೆ. ಪೌಲ್ಟ್ರಿ 20 ಲಕ್ಷಕ್ಕಿಂತ ಹೆಚ್ಚು ಉತ್ಪಾದಿಸುವ ನಿರೀಕ್ಷೆಯಿದೆ. ಪಶುಆಹಾರ 4-5 ಲಕ್ಷ ಟನ್ ಹಾಗೂ 7-10 ಲಕ್ಷದ ಎಥನಾಲ್ ಗಾಗಿ ಬಳಸುತ್ತಾರೆ. ಇದೆಲ್ಲಾ ಕೇಂದ್ರ ಸರ್ಕಾರ ಮಾಡಬೇಕು .ಎಥನಾಲ್ ಹಾಗೂ ಎಂ ಎಸ್ ಪಿ, ಎಫ್ ಆರ್ ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಆದರೆ ಕೇಂದ್ರ ಸರ್ಕಾರದವರು ನಮಗೇನು ಜವಾಬ್ದಾರಿ ಇಲ್ಲವೆಂಬಂತೆ ಮಾತನಾಡುತ್ತಾರೆ. ಸಂಸದರ ಸಭೆ ಕರೆಯಬೇಕು ಎಂದು ಚರ್ಚಿಸಲಾಗಿದ್ದು, ಡಿಸೆಂಬರ್ 8 ರಂದು ಸಂಸತ್ತು ಮುಂದೂಡಬಹುದೆಂದು ಭಾವಿಸಿದ್ದು, ಅಂದೇ ಸಭೆ ಕರೆಯಬೇಕೆಂದು ತೀರ್ಮಾನಿಸಲಾಗಿದೆ ಎಂದರು. ಏಕೆಂದರೆ ಅಂದು ರಾಜ್ಯದ ಸಂಸದರು ಅಲ್ಲಿಯೇ ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್‌, ದೆಹಲಿಗೆ ಹೋಗಿ ಸರ್ವಪಕ್ಷ ಸಂಸದರ ಸಭೆ ನಡೆಸುವ ಬಗ್ಗೆ ಚರ್ಚೆ ಮಾಡಿದ್ದು, ಡಿ.8 ರಂದು ದೆಹಲಿಗೆ ಹೋಗಿ ವಾಪಸ್ಸಾಗಬೇಕು ಎಂದು ತೀರ್ಮಾನಿಸಿದ್ದೇವೆ. ಮೇಕೆದಾಟು ವಿಚಾರವಾಗಿ ನ್ಯಾಯಾಲಯದ ತೀರ್ಪು ಬಂದಿದ್ದು, ಮೆಕ್ಕೆಜೋಳ ದರ ವಿಚಾರ, ಕೇಂದ್ರ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಅನುದಾನ ಬಾರದಿರುವ ವಿಚಾರವಾಗಿ ಸಂಸದರ ಜತೆ ಚರ್ಚೆ ಮಾಡಿ ಅವರಿಗೆ ಜವಾಬ್ದಾರಿ ನೀಡಬೇಕಾಗಿದೆ. ಈ ಸಭೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನು ಹಾಗೂ ಜೆಡಿಎಸ್ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೇವೆ” ಎಂದು ಹೇಳಿದರು.

ನಿಮ್ಮ, ನಿಮ್ಮ ಪರವಾಗಿ ನಿಂತಿದ್ದ ಪಕ್ಷದ ಶಾಸಕರು, ಸಚಿವರು ಒಂದಾಗಿ ಸಾಗುತ್ತಾರಾ ಎಂದು ಕೇಳಿದಾಗ, “ನಮ್ಮ ಪಕ್ಷದಲ್ಲಿ ಯಾರೂ ಬೇರೆಯಾಗಿಲ್ಲ. ನೀವುಗಳು (ಮಾಧ್ಯಮಗಳು) ಬೇರೆ ಮಾಡುತ್ತಿದ್ದೀರಿ” ಎಂದರು.

ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸದನದಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಾರಂತೆ ಎಂದು ಕೇಳಿದಾಗ, “ಅವರು ಮಾಡಲಿ, ಯಾವ ವಿಚಾರಕ್ಕೆ ಮಾಡುತ್ತಾರೆ? ಅವರದ್ದು ಖಾಲಿ ಟ್ರಂಕ್” ಎಂದು ಉತ್ತರಿಸಿದರು. ಸಮಯ ಸಿಕ್ಕರೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ಅವರು ಕರೆದರೆ ಹೋಗಿ ಭೇಟಿ ಮಾಡುತ್ತೇವೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *