ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಚಿಕ್ಕೋಡಿ ಪಟ್ಟಣದಲ್ಲಿರುವ ಮನೆಯಲ್ಲಿ 19ಕ್ಕೂ ಅಧಿಕ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗೈಡ್‌ಗಳು ಉದ್ದೇಶಪೂರ್ವಕವಾಗಿ ಪಿಎಚ್‌ಡಿ ಪದವಿ ನೀಡದೆ ಸತಾಯಿಸಿದ್ದರಿಂದ ಬೇಸರಗೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಮುಂದಾಗಿದ್ದಾರೆ, ಆಕೆಯನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯಾರ್ಥಿನಿ ಆರು ತಿಂಗಳ ಹಿಂದೆ ಪಿಎಚ್‌ಡಿ ಪೂರ್ಣಗೊಳಿಸಿದ್ದರು. ವಿದ್ಯಾರ್ಥಿನಿ ಗೈಡ್ ಕೆ.ಎಲ್.ಎನ್. ಮೂರ್ತಿ, ಕುಲಪತಿ ಸಿ.ಎಂ. ತ್ಯಾಗರಾಜ್ ಮತ್ತು ರಿಜಿಸ್ಟರ್ ಸಂತೋಷ ಕಾಮೇಗೌಡ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಕುಲಪತಿ ಯವರಿಗೆ ಹಾಗೂ ರಿಜಿಸ್ಟ್ರಾರ್ಗೆ ದೂರು ನೀಡಿದ್ದರು. ಹೀಗಾಗಿ ಟಾರ್ಗೆಟ್ ಮಾಡಿ ಪಿಎಚ್‌ಡಿ ನೀಡಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.
ರಾಣಿ ಚನ್ನಮ್ಮ ವಿವಿ ಕುಲಪತಿ ಸಿ.ಎಂ ತ್ಯಾಗರಾಜ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ. ಇತಿಹಾಸ ವಿಭಾಗದಲ್ಲಿ ವಿದ್ಯಾರ್ಥಿನಿ ಸಂಶೋಧನೆ ನಡೆಸಿ ಪ್ರಬಂಧ ಸಲ್ಲಿಕೆ ಮಾಡಿದ್ದರು. 2021ರಲ್ಲಿ ಸಂಶೋಧನೆ ಆರಂಭ ಮಾಡಿ 2025ರಲ್ಲಿ ಪೂರ್ಣ ಆಗಿದೆ. ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿನಿ ಕಿರುಕುಳ ಆರೋಪ ಮಾಡಿದ್ದರು. ಸಿಂಡಿಕೇಟ್ನಲ್ಲಿ ವಿಚಾರ ಮುಂದಿಟ್ಟು ವರದಿ ನೀಡಲು ಸೂಚಿಸಲಾಗಿತ್ತು. ಆಗ ಪ್ರಾಧ್ಯಾಪಕ ಕೆಎನ್ ಮೂರ್ತಿ ಕಿರುಕುಳ ನೀಡಿದ್ದು ತಿಳಿದುಬಂದಿತ್ತು. ಅವರ ವಿರುದ್ಧ ಕ್ರಮಕ್ಕೆ ತೀರ್ಮಾನ ಕೈಗೊಂಡಿದ್ದೆವು. ಕೆಲಸದಿಂದ ಅಮಾನತು ಮಾಡಿ ಆದೇಶ ಮಾಡಲಾಗಿತ್ತು ಎಂದಿದ್ದಾರೆ.
ಬಳಿಕ ವಿದ್ಯಾರ್ಥಿನಿ ದೂರು ವಾಪಸ್ ಪಡೆದಿದ್ದರು. ಮತ್ತೊಮ್ಮೆ ಸಿಂಡಿಕೇಟ್ನಲ್ಲಿ ಚರ್ಚೆ ಮಾಡಿ ಪ್ರಮಾಣ ಪತ್ರ ನೀಡಲು ಮುಂದಾಗಿದ್ದೆವು. ತೀರ್ಮಾನ ಆಗದ ಹಿನ್ನೆಲೆ ಘಟಿಕೋತ್ಸವದಲ್ಲಿ ಅವರಿಗೆ ಪಿಎಚ್‌ಡಿ ಪದವಿ ನೀಡಲು ಆಗಲಿಲ್ಲ. 4ರಂದು ತುರ್ತು ಸಿಂಡಿಕೇಟ್ ಸಭೆ ಕರೆಯಲಾಗಿದ್ದು ಅದರಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ.


