Tuesday, December 02, 2025
Menu

ಕುಕ್ಕುಟ ಉದ್ಯಮಕ್ಕೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರದಿಂದ ಕ್ರಮ

ಕುಕ್ಕುಟ ಉದ್ಯಮಕ್ಕೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ. ಪಶು ಹಾಗೂ ಕುಕ್ಕುಟ ಆಹಾರ ಉತ್ಪಾದಕರು ಕೇಂದ್ರ ಸರ್ಕಾರ ನಿಗದಿಪಡಿಸಿರುವ ರೂ. 2400 ರ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಖರೀದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧ ಸಭಾಂಗಣದಲ್ಲಿ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರೊಂದಿಗೆ ನಡೆಸಿದ ಸಭೆಯಲ್ಲಿ  ಅವರು ಮಾತನಾಡಿದರು. ರಾಜ್ಯದಲ್ಲಿ ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಮಾರುಕಟ್ಟೆ ಫೆಡರೇಶನ್ ಮೂಲಕ ರೈತರಿಂದ ಮೆಕ್ಕೆಜೋಳ ಖರೀದಿಸಿ ಸರಬರಾಜು ಮಾಡಲಾಗುವುದು. ಸಾಗಾಣಿಕೆ ವೆಚ್ಚ, ಲೋಡಿಂಗ್, ಅನ್ಲೋಡಿಂಗ್ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.  ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳ ದರ ಕುಸಿದಿರುವುದರಿಂದ ರೈತರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಡಿಸ್ಟಿಲರಿಗಳು 7ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದೆ. ಕೆಎಂಎಫ್ 50ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ಹೇಳಿದರು.

ಇದೇ ರೀತಿ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ವಲಯ ಇಂಡೆಂಟ್ ನೀಡಿ 5ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಯನ್ನು ತಕ್ಷಣ ಪ್ರಾರಂಭಿಸಲು ಸೂಚನೆ ನೀಡಿದರು. ರಾಜ್ಯದಲ್ಲಿ ಖಾರಿಫ್ ಹಂಗಾಮಿನಲ್ಲಿ 17.6 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, 53.8 ಲಕ್ಷ ಮೆಕ್ಕೆಜೋಳ ಉತ್ಪಾದನೆ ಅಂದಾಜಿಸಲಾಗಿದೆ. ಇದರಲ್ಲಿ ಶೇ.50-60ರಷ್ಟು ಮೆಕ್ಕೆಜೋಳವನ್ನು ಕೋಳಿ ಮತ್ತು ಪಶು ಆಹಾರಕ್ಕಾಗಿ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿವರ್ಷ ಅಂದಾಜು 25.89 ಲಕ್ಷ ಟನ್ ಮೆಕ್ಕೆಜೋಳವನ್ನು ಕೋಳಿ ಮತ್ತು ಪಶು ಆಹಾರಕ್ಕಾಗಿ ಉಪಯೋಗಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಚಿವರಾದ ಕೆ.ಹೆಚ್.ಮುನಿಯಪ್ಪ, ಕೆ. ವೆಂಕಟೇಶ್, ಆರ್.ಬಿ.ತಿಮ್ಮಾಪುರ್, ಎನ್. ಚಲುವರಾಯ ಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *