ಶೋಷಿತರು ಮತ್ತು ಸಾಮಾಜಿಕ ತುಳಿತಕ್ಕೊಳಗಾದವರಿಗೆ ಸಾಂವಿಧಾನಿಕ ಸವಲತ್ತು ನೀಡುವ ವಿಚಾರದಲ್ಲಿ ಶಾಸನಸಭೆಗಳಲ್ಲಿ ಪಕ್ಷಾತೀತ ಆರೋಗ್ಯದಾಯಕ ಮತ್ತು ಸಂಯಮಪೂರ್ಣ ಚರ್ಚೆಗಳ ಅವಶ್ಯತೆ ಇದೆ. ಮೀಸಲಾತಿ ವಿಷಯ ಯಾವುದೇ ರಾಜಕೀಯ ಪಕ್ಷದ ಪೊಲಿಟಿಕಲ್ ಅಜೆಂಡಾ ಆಗಬಾರದು.
ಮೀಸಲು ಹಾಗೂ ಒಳಮೀಸಲು. ದೇಶದ ಅತಿ ದೊಡ್ಡ ರಾಜ್ಯ ದಲ್ಲಿ ಒಂದಾದ ಬಿಹಾರದ ನಂತರ ಕರ್ನಾಟಕವನ್ನು ಬಹುವಾಗಿ ಬಾಧಿಸುತ್ತಿರುವ ಸಂಗತಿ. ರಾಜಕೀಯ ಪಕ್ಷಗಳಿಗೆ ಇದೊಂದು ನಿತ್ಯ ಸವಾಲು ಹಾಗೂ ಆಡಳಿತಗಾರರ ಪಾಲಿಗೆ ಒಂದು ನಿತ್ಯಗಂಡ ! ಪರಿಶಿಷ್ಟರಿಗೆ ಮೀಸಲು ಒದಗಿಸಿದ ಸಂವಿಧಾನ ಜಾರಿಯಾಗಿ ಎಪ್ಪತ್ತು ವರ್ಷಗಳಾಯಿತು. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮಾನತೆ ಸಾಧಿಸಲೆಂದು ಸಮಾಜದ ದೀನ, ದುರ್ಬಲರು ಮತ್ತು ಅಸಮಾನತೆ ಹೊಂದಿರುವ ಸಮುದಾಯಗಳಿಗೆ ಸಂವಿಧಾನ ನೀಡಿದ ಒಂದು ಸವಲತ್ತು. ಇದುವರೆಗಿನ ಯಾವ ಸರ್ಕಾರಗಳೂ ಸಂವಿಧಾನದ ಆಶಯಗಳಂತೆ ಮೀಸಲಾತಿಯನ್ನು ವಿಧಿಬದ್ಧವಾಗಿ ಜಾರಿಗೆಗೊಳಿಸಲಾಗಿಲ್ಲ. ಹಾಗಾದರೆ ಇದರ ಹಣೆಬರಹವೇನು ? ಸಮಾಜದ ಶೋಷಿತರಿಗೆ ಮತ್ತು ದುರ್ಬಲರಿಗೆ ಸಮಾನತೆ ಎಂಬುದು ಗಗನಕುಸುಮವೇ ? ಬರೀ ಪೊಳ್ಳು ಭರವಸೆಗಳು ಮತ್ತು ಆಶ್ವಾಸನೆಗಳ ಮೂಲಕವೇ ಮೀಸಲು ಮತ್ತು ಒಳಮೀಸಲು ಎಂಬುದು ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳ ಲೋಕಾಭಿರಾಮ ಚರ್ಚೆಗೆ ನಿತ್ಯ ನಿರಂತರ ವಸ್ತುವಾಗಿಯೇ ಇರಬೇಕೇ?
ಹೌದು. ಸಮಾಜವಿಂದು ಬೃಹತ್ ಆಗಿ ಬೆಳೆದಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ನೂರಾರು ಜಾತಿ ಮತ್ತು ಉಪಜಾತಿಗಳು. ಅದರಲ್ಲಿಯೂ ಕರ್ನಾಟಕದಲ್ಲಿ ಇಂತಹ ಜಾತಿ ಮತ್ತು ಉಪಜಾತಿಗಳ ಸಂಕೀರ್ಣತೆಯ ಪ್ರಮಾಣ ಅಧಿಕ . ಅಸಮಾನತೆಯಿಂದ ನಲುಗಿದ ಸಮಾಜದ ಶೋಷಿತರಿಗೆ ರಾಜ್ಯದಲ್ಲಿ ನಿಜವಾದ ನ್ಯಾಯವನ್ನು ದೊರಕಿಸಿಕೊಟ್ಟವರು ಹಿಂದಿನ ಮುಖ್ಯಮಂತ್ರಿ ದೇವರಾಜ ಅರಸು. ರಾಜ್ಯದಲ್ಲಿ ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ರಚನೆಗೊಂಡ ಜಾತಿ ಸಮೀಕ್ಷೆ ಆಯೋಗಗಳು ಮತ್ತು ಅದರ ತಿರುಳು ಮತ್ತು ಆಶಯಗಳಿಂದು ಬಹಿರಂಗ ಚರ್ಚೆಯಾಗುವ ಅಗತ್ಯವಿದೆ. ಪರಿಶಿಷ್ಟರ ಮೀಸಲು ವಿಚಾರದಲ್ಲಿ ಕಳೆದ ೨೫ ವರ್ಷಗಳ ಹಿಂದೆ ರಚನೆಗೊಂಡ ನ್ಯಾಯಮೂರ್ತಿ ಎ ಜೆ ಸದಾಶಿವ ವರದಿಯ ಮತ್ತು ಈ ವರದಿಯಲ್ಲಿ ಉಲ್ಲೇಖವಾಗಿರುವ ಪ್ರಮುಖ ಅಂಶಗಳ ಬಗ್ಗೆ ವ್ಯಾಪಕ ಚರ್ಚೆಯೇ ಆಗಿಲ್ಲ . ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷ ಕಾಂತರಾಜು ಮತ್ತು ಒಳಮೀಸಲು ಕುರಿತು ಈಗ ಅಧ್ಯಯನ ಮಾಡಿರುವ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಪ್ರತ್ಯೇಕ ವರದಿಗಳನ್ನು ಸಲ್ಲಿಸಿರುವುದು ಸರಿಯಷ್ಟೆ. ಆದರೆ ಒಟ್ಟಾರೆ ಈ ವರದಿಗಳು ಯಾವ ರೀತಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಮತ್ತು ಸಮುದಾಯಕ್ಕೆ ಸರ್ಕಾರದಿಂದ ಅನುಕೂಲವಾಗಲಿದೆ ಎಂಬ ಅಂಶವಂತೂ ನಿಗೂಢ. ಈ ನಿಟ್ಟಿನಲ್ಲಿ ರಾಜ್ಯದ ಶಾಸನಸಭೆಯಲ್ಲಿ ಚರ್ಚೆ ಆಗಬೇಕಿದೆ.
ಮೀಸಲು ಮತ್ತು ಒಳಮೀಸಲು ಎಂಬುದು ರಾಜಕೀಯ ಪಕ್ಷಗಳ ಅಜೆಂಡಾ ಆಗಬಾರದು. ಸಮಾಜದ ಶೋಷಿತರಿಗೆ ಸಾಂವಿಧಾನಿಕವಾಗಿ ಲಭ್ಯವಿರುವ ಸವಲತ್ತುಗಳನ್ನು ನೀಡುವ ಬಗ್ಗೆ ಚರ್ಚೆ ನಡೆಸುವಾಗ ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳೆಂಬ ತಾರತಮ್ಯವೇ ಬಾಲಿಶ ! ಕರ್ನಾಟಕ ರಾಜ್ಯದ ಶಾಸನಸಭೆಗೆ ಸ್ವರಾಜ್ಯಪೂರ್ವದಿಂದಲೂ ಪ್ರಜಾತಂತ್ರದ ಹಿರಿಮೆ ಇದೆ. ಪಕ್ಷಾತೀತ ಮತ್ತು ಆರೋಗ್ಯದಾಯಕ ಮತ್ತು ಅರ್ಥಪೂರ್ಣ ಚರ್ಚೆಗಳಿಗೆ ರಾಜ್ಯ ವಿಧಾನಮಂಡಲದ ಗತಕಾಲದ ಚರ್ಚೆಗಳನ್ನು ನಾವಿಂದು ಮೆಲಕು ಹಾಕುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸನಸಭೆಗಲ್ಲಿ ಇಂದು ಆಗಬೇಕಿರುವುದು ಶೋಷಿತರಿಗೆ ದೊರಕಬೇಕಿರುವ ಮೀಸಲು ಕುರಿತ ಅರ್ಥಪೂರ್ಣ ಚರ್ಚೆಯೇ ವಿನಹ ರಾಜಕೀಯ ಪ್ರತಿಷ್ಠೆಗಳ ಗದ್ದಲ ಗೌಜು ಅಲ್ಲ.