ಧರ್ಮಸ್ಥಳದಲ್ಲಿ ಸರಣಿ ಸಾವುಗಳ ಕುರಿತು ವರದಿ ಮಾಡಿ ವೈರಲ್ ಆಗಿದ್ದ ಯೂಟ್ಯೂಬರ್ ಸಮೀರ್ ಗೆ ಮಂಗಳೂರು ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಧರ್ಮಸ್ಥಳದ ಕುರಿತು ಸತತ ವರದಿ ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಸುಮೊಟೊಪ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಗಸ್ಟ್ 19ರಂದು ನಿರೀಕ್ಷಣಾ ಜಾಮೀನು ಕೋರಿ ಸಮೀರ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಧರ್ಮಸ್ಥಳಕ್ಕೆ ಬಂದರೆ ನನ್ನ ಜೀವಕ್ಕೆ ಅಪಾಯವಿದೆ. ನನ್ನ ಸುರಕ್ಷತೆಗೆ ಧಕ್ಕೆ ಆಗುವ ಸಾಧ್ಯತೆ ಇದ್ದು, ಧರ್ಮಸ್ಥಳ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಸಮೀರ್ ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ ಗುರುವಾರ ತೀರ್ಪು ಕಾಯ್ದಿರಿಸಿತ್ತು. ಕೆಲ ಷರತ್ತು ವಿಧಿಸಿದ ನ್ಯಾಯಾಲಯ 75 ಸಾವಿರ ವೈಯಕ್ತಿಕ ಬಾಂಡ್ ಮೂಲಕ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಾಸಿಕ್ಯೂಷನ್ ಸಾಕ್ಷ್ಯು ಹಾಳು ಮಾಡಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡಬಾರದು ಹಾಗೂ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇದೇ ವೇಳೆ ಸಮೀರ್ ಬಂಧನಕ್ಕೆ ಮುಂದಾಗಿದ್ದ ಪಿಎಸ್ ಐ ಆನಂದ್ ಎನ್ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸರು ಗುರುವಾರ ಬೆಳಿಗ್ಗೆಯಿಂದಲೇ ಬನ್ನೇರುಘಟ್ಟದಲ್ಲಿರುವ ಸಮೀರ್ ಮನೆಯನ್ನು ಸುತ್ತುವರಿದಿದ್ದಾರೆ. ಅವರ ಬಂಧನಕ್ಕೆ ಮುಂದಾಗಿದ್ದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶವಗಳ ಹೂತಿಟ್ಟ ಪ್ರಕರಣವನ್ನು ಎಸ್ ಐಟಿ ತನಿಖೆ ನಡೆಸುತ್ತಿರುವ ನಡುವೆಯೇ ಸಾಮಾಜಿಕ ಹೋರಾಟಗಾರ ಮಹೇಶ್ ತಿಮರೋಡಿ ಅವರನ್ನು ಉಜಿರೆಯಲ್ಲಿ ಉಡುಪಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ಯೂಟ್ಯೂಬರ್ ಸಮೀರ್ ಅವರನ್ನು ಬಂಧಿಸುವ ಪ್ರಯತ್ನ ನಡೆದಿದ್ದು, ಸುಳಿವು ದೊರೆತ ಸಮೀರ್ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದ ಬೆನ್ನಲ್ಲೇ ಅಲರ್ಟ್ ಆಗಿರುವ ಪೊಲೀಸರು ವಿವಿಧ ಪ್ರಕರಣಗಳ ಹೆಸರಿನಲ್ಲಿ ಧರ್ಮಸ್ಥಳದ ವಿರುದ್ಧ ವೀಡಿಯೋ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.