ಕೇಂದ್ರ ಸರ್ಕಾರವು 2025-26ರ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಭಾರತದ ಜಿಡಿಪಿ 8.2%ಗೆ ಬೆಳವಣಿಗೆಯಾಗಿದೆ ಎಂದು ಹೇಳಿಕೊಂಡಿದೆ. ಆದರೆ ಈ ಜಿಡಿಪಿ ದತ್ತಾಂಶಗಳಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಿ ಗ್ರೇಡ್ ಕೊಟ್ಟಿದೆ.
ಕೇಂದ್ರ ಸರ್ಕಾರವು ಎಲ್ಲವೂ ಸುಭದ್ರವಾಗಿವೆ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಬಡತನ ಕಡಿಮೆಯಾಗುತ್ತಿದೆ. ಹಣದುಬ್ಬರ ತೀರಾ ಕಡಿಮೆ ಇದೆ. ಜನರ ಖರ್ಚಿನ ಶಕ್ತಿ ಹೆಚ್ಚಾಗಿದೆ ಎಂದೆಲ್ಲ ಸುಳ್ಳು ಹೇಳುತ್ತ ನಂಬಿಸುತ್ತ ಬಂದಿದೆ. ಆದರೆ ಸರ್ಕಾರದ ಸುಳ್ಳುಗಳ ಒಳ ಹೂರಣವನ್ನು ಐಎಂಎಫ್ ತೆರೆದಿಟ್ಟಿದೆ.
ಭಾರತ ಸರ್ಕಾರ ಜಿಡಿಪಿ ದತ್ತಾಂಶಗಳನ್ನು ಸರಿಯಾಗಿ ಲೆಕ್ಕಹಾಕಿಲ್ಲ. ಭಾರತದ ಡೇಟಾಗಳು ನಿಖರತೆ ಮತ್ತು ವಿಶ್ವಾಸಾರ್ಹತೆ ಹೊಂದಿಲ್ಲವೆಂದು ಐಎಂಎಫ್ ಸ್ಪಷ್ಟವಾಗಿ ಹೇಳಿದೆ. ಐಎಂಎಫ್‌ನ ಸಿ ಗ್ರೇಡ್ ಎಂದರೆ, ಡೇಟಾ ಆಗಾಗ ಲಭ್ಯವಿದ್ದರೂ ಅದರ ಗುಣಮಟ್ಟದಲ್ಲಿ ದೋಷಗಳಿರುತ್ತವೆ. ಆರ್ಥಿಕ ನೀತಿ ರೂಪಿಸಲು ಮತ್ತು ಅಂತರರಾಷ್ಟ್ರೀಯ ಹೋಲಿಕೆಗೆ ಸೂಕ್ತವಾಗಿರುವುದಿಲ್ಲ ಎಂದು ಸಂಬಂಧಿಸಿದ ತಜ್ಞರು ಹೇಳುತ್ತಾರೆ.
ಐಎಂಎಫ್‌ನ ಮೌಲ್ಯಮಾಪನದಲ್ಲಿ ಭಾರತದ ದತ್ತಾಂಶಗಳು 2ನೇ ಬಾರಿಗೆ ಸಿ ಗ್ರೇಡ್ ಪಡೆದುಕೊಂಡಿದೆ. 2024ರಲ್ಲಿಯೂ ಭಾರತಕ್ಕೆ ಸಿ ಗ್ರೇಡ್ ದೊರೆತಿತ್ತು. ಇದು ದೇಶದ ಆರ್ಥಿಕತೆಯ ಬೆಳವಣಿಗೆಯನ್ನು ದುರ್ಬಲಗೊಳಿಸಿದೆ.
ಭಾರತದ ಆರ್ಥಿಕ ದತ್ತಾಂಶಗಳಿಗೆ ಸಿ ಗ್ರೇಡ್ ಬಂದಿದ್ದರೂ, ಕೇಂದ್ರ ಸರ್ಕಾರವು ತನ್ನ ಜಿಡಿಪಿ ವರದಿಯನ್ನು ಬಿಡುಗಡೆ ಮಾಡಿ 2025-26ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯು 8.2%ಗೆ ಬೆಳೆವಣಿಗೆ ಕಂಡಿದೆ ಎಂದು ಘೋಷಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ (2025ರ ಜುಲೈ-ಸೆಪ್ಟೆಂಬರ್) ಜಿಡಿಪಿ ದರವು 5.6% ಎಂದು ಹೇಳಿಕೊಂಡಿದ್ದು,
ಒಂದು ವರ್ಷದಲ್ಲಿ 3% ಏರಿಕೆಯಾಗಿರುವುದು ಆಶ್ಚರ್ಯಕರವಾಗಿದೆ. ಐಎಂಎಫ್‌ನ ವಿಮರ್ಶೆಯು ಎನ್‌ಎಸ್‌ಒ ಘೋಷಿಸಿರುವ ಅಂಕಿಅಂಶಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ.
ಜಿಡಿಪಿ ಮತ್ತು ಸಿಪಿಐನ ಬೇಸ್ ಇಯರ್ 14 ವರ್ಷ ಹಳೆಯದು. ಡಿಜಿಟಲ್ , ಯುಪಿಐ, ಜಿಎಸ್‌ಟಿ ಒಳಗೊಂಡಿರುವ ಆರ್ಥಿಕ ವ್ಯವಸ್ಥೆಯನ್ನು ಹಳೆಯ ಬೇಸ್ ಇಯರ್ ಮೇಲೆ ಅಳೆಯುವುದು ಸೂಕ್ತವಲ್ಲ. ಜಿಡಿಪಿಯನ್ನು ಅಳೆಯಲು ಸರಾಸರಿ 5 ವರ್ಷಗಳ ಬೇಸ್ ಇಯರ್ ಇರಬೇಕು. ಪ್ರೊಡ್ಯೂಸರ್ ಪ್ರೈಸ್ ಇಂಡೆಕ್ಸ್ ಬದಲಾಗಿ ಭಾರತದಲ್ಲಿ ವ್ಯಾಪಾರ ಬೆಲೆ ಸೂಚ್ಯಂಕ ಬಳಸಲಾಗುತ್ತಿದೆ. ಇದು ನಿಜವಾದ ಜಿಡಿಪಿಯನ್ನು ಅಂದಾಜಿಸಲು ತೊಡಕಾಗಿದೆ ಎಂದು ಹೇಳಲಾಗಿದೆ.


