ಶೃಂಗೇರಿಯ ವ್ಯಕ್ತಿಯೊಬ್ಬರಿಗೆ ಷೇರು ಮಾರುಕಟ್ಟೆ ಹೆಸರಲ್ಲಿ ಆನ್‌ಲೈನ್ ವಂಚಕರು 3 ಕೋಟಿ 27 ಲಕ್ಷ ರೂ.ಲೂಟಿ ಹೊಡೆದಿರುವುದು ಬಹಿರಂಗಗೊಂಡಿದೆ.
ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಲ್ಲಿ ನಕಲಿ ಖಾತೆ ತೆರೆದು ಶೃಂಗೇರಿಯ ನಟರಾಜನ್ ಎಂಬರ ಹಣ ದೋಚಿರುವ ವಂಚಕರ ವಿರುದ್ಧ ಚಿಕ್ಕಮಗಳೂರು ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಂಚಕರು ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದಾರೆ. ವಾಟ್ಸಾಪ್ನಲ್ಲಿ ಬಂದ ಅದರ ಲೋಗೋ ನಂಬಿ ಶಂಕರ್ ನಟರಾಜನ್ ಮೋಸ ಹೋಗಿದ್ದಾರೆ. ನೀವು ಹೂಡಿಕೆ ಮಾಡಿದ ಹಣ ಲಾಭ ಬಂದಿದೆ. ನಿಮ್ಮ ಖಾತೆಯಲ್ಲಿ 9 ಕೋಟಿ ರೂ. ಇದ್ದು, ಅದನ್ನು ಪಡೆಯಲು 1 ಕೋಟಿ 9 ಲಕ್ಷ ರೂ. ಕಮಿಷನ್ ಹಾಕುವಂತೆ ವಂಚಕರು ಬೇಡಿಕೆ ಇಟ್ಟಿದ್ದಾರೆ. ಹಂತ ಹಂತವಾಗಿ 3 ಕೋಟಿ 27 ಲಕ್ಷ ರೂ. ಹಾಕಿಸಿಕೊಂಡು ವಂಚಿಸಿದ್ದಾರೆ. ಮಹಾರಾಷ್ಟ್ರದ ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ವೇಳೆ ವಂಚನೆ ಆಗಿರುವುದು ತಿಳಿದಿದೆ.
ಆನ್‌ಲೈನ್, ಸೈಬರ್ ವಂಚನೆ ಪ್ರಕರಣಗಳಲ್ಲಿ ಸಿಲುಕಿ ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿದ್ದು, ಮಾಧ್ಯಮಗಳಲ್ಲೂ ವರದಿಯಾಗುತ್ತಿವೆ. ಸಂಬಂಧಿಸಿದ ಇಲಾಖೆ, ಪೊಲೀಸರು ಕೂಡ ಈ ಸಂಬಂಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಆದರೂ ಇದರಿಂದ ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ, ಇದು ಅಜ್ಞಾನವೇ ಅಥವಾ ಅತಿಯಾಸೆಯೇ ಎಂಬುದು ಗೊತ್ತಾಗದ ಸ್ಥಿತಿ ನಿರ್ಮಾಣಗೊಂಡಿದೆ.


