ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂ ಎಸ್ ಎಸ್ ಬಿ) ಗ್ರಾಹಕರು ನೀರಿನ ಬಾಕಿ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇ.100 ರಷ್ಟು ಮನ್ನಾ ಮಾಡುವ ಏಕಕಾಲಿಕ ತೀರುವಳಿ ಯೋಜನೆಗೆ ಗುರುವಾರ ನಡೆದ ರಾಜ್ಯ ಸಂಪುಟ ಸಭೆ ಅನುಮೋದನೆ ನೀಡಿದೆ.
ಜಲಮಂಡಳಿಯಲ್ಲಿ ಬಾಕಿಯಿರುವ 701 ಕೋಟಿ ರೂಗಳ ಪೈಕಿ 431 ಕೋಟಿ ರೂ. ಅಸಲು ಹಾಗೂ ಬಡ್ಡಿ ಮೊತ್ತ 262 ಕೋಟಿ ರೂ ಇದೆ ಎಂದು ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್ ಕೆ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.
ಸಂಪುಟದಲ್ಲಿ 7 ಬಿಲ್ ಗಳಿಗೆ ಅನುಮೋದನೆ ಸಿಕ್ಕಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿವೆ. ಅಲ್ಲದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಘನತ್ಯಾಜ್ಯ ಸಮರ್ಪಕ ನಿರ್ವಹಣೆಗಾಗಿ ಅಪರೇಷನ್ ಆ್ಯಂಡ್ ಮೈಟೇನೇನ್ಸ್ ಆಫ್ ಲ್ಯಾಂಡ್ ಫಿಲ್ ಸೈಟ್ಸ್ ಪ್ಯಾಕೇಜ್ ಕಾಮಗಾರಿಗಳನ್ನು ರೂ.100 ಕೋಟಿಗಳ ಮೊತ್ತದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಬಿಎಸ್ ಡಬ್ಲ್ಯೂ ಎಂಎಲ್ ) ಮೂಲಕ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಸಂಪುಟ ಸಭೆ ಪ್ರಮುಖ ನಿರ್ಣಯಗಳು
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು (ತಿದ್ದುಪಡಿ) ವಿಧೇಯಕ, 2025″ಕ್ಕೆ ಅನುಮೋದನೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ-ಭಟ್ಕಳ ವಿಧಾನಸಭಾ ಕ್ಷೇತ್ರದ ಮುಳ್ಕೊಡು ಗ್ರಾಮದ ಸಮೀಪ ಶರಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ (ಉಪ್ಪು ನೀರು ತಡೆ ಅಣೆಕಟ್ಟು)ನ್ನು 200 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕೆಲವು ನಗರ ಸ್ಥಳೀಯ ಸಂಸ್ಥೆಗಳನ್ನು ಮತ್ತು ಕೆಲವು ಗ್ರಾಮಗಳನ್ನು ಸೇರ್ಪಡೆಗೊಳಿಸಿ “ಮೈಸೂರು ಗ್ರೇಡ್-1 ಮಹಾನಗರಪಾಲಿಕೆ”ಯನ್ನಾಗಿ ಪರಿವರ್ತಿಸಲು ಒಪ್ಪಿಗೆ ಕೊಡಲಾಗಿದೆ.
ರಾಜ್ಯ ದತ್ತಾಂಶ ಕೇಂದ್ರ ಮತ್ತು ಹತ್ತಿರದ ವಿಪತ್ತು ಚೇತರಿಕಾ ಕೇಂದ್ರ ಹಾಗೂ ವಿಪತ್ತು ಚೇತರಿಕಾ ಕೇಂದ್ರ ಕಾರ್ಯಾಚರಣೆ ಮತ್ತು ನಿರ್ವಹಣಾ ಸೇವೆಯನ್ನು ಒಟ್ಟು ರೂ.143.6 ಕೋಟಿಗಳ ವೆಚ್ಚದಲ್ಲಿ 5 ವರ್ಷಗಳ ಅವಧಿಗೆ ಒದಗಿಸಲು ಸೂಕ್ತ ನಿರ್ವಹಣಾ ಸಂಸ್ಥೆಯನ್ನು ಆಯ್ಕೆ ಮಾಡಲು ಒಪ್ಪಿಗೆ ನೀಡಲಾಗಿದೆ
2025-26ನೇ ಸಾಲಿನಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ ರಾಜ್ಯಾದಾದ್ಯಂತ 114 ಆಯುಷ್ಮಾನ್ ಆರೋಗ್ಯ ಮಂದಿರಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ರೂ.74.10 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ | ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ ನೀಡಲಾಗಿದೆ. ಔಷಧಗಳು ಮತ್ತು ಸೌಂದರ್ಯವರ್ಧಕಗಳು (ಕರ್ನಾಟಕ ತಿದ್ದುಪಡಿ) ವಿಧೇಯಕ, 2025’ಕ್ಕೆ ಸಂಪುಟ ಅನುಮೋದನೆ ನೀಡಿದೆ.
ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಹಿಂಡಲಗ ಗ್ರಾಮದ ಸ.ನಂ.189/1 ರಲ್ಲಿ 20 ಗುಂಟೆ “ಫಡಾ” ಜಮೀನನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್ ಬೆಂಗಳೂರು ಇವರಿಗೆ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ, ಮಾಗಡಿ ತಾಲ್ಲೂಕು, ಕುದೂರು ಗ್ರಾಮದ ಸ.ನಂ.47ರಲ್ಲಿ 3-12 ಎಕರೆ ಜಮೀನನ್ನು ಬಸ್ ನಿಲ್ದಾಣ ಮತ್ತು ಬಸ್ ಡಿಪೋ ನಿರ್ಮಾಣಕ್ಕಾಗಿ ಕೆ.ಎಸ್.ಆರ್.ಟಿ.ಸಿಗೆ ಉಚಿತವಾಗಿ ಮಂಜೂರು ಮಾಡಲು ಒಪ್ಪಿಗೆ ಕೊಡಲಾಗಿದೆ.


