ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ರಸಗೊಬ್ಬರ ಪಡೆಯಲು ವಿತರಣಾ ಕೇಂದ್ರದ ಎದುರು ಸತತ ಎರಡು ದಿನ ಸರತಿ ಸಾಲಿನಲ್ಲಿ ನಿಂತಿದ್ದ ರೈತ ಮಹಿಳೆ ಮೃತಪಟ್ಟಿದ್ದಾರೆ.
ಭ್ರೂಯಾ ಬಾಯಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಂಗಳವಾರದಿಂದ ಅವರು ಬಿಸಿಲು-ಗಾಳಿಯಲ್ಲಿ ರಸಗೊಬ್ಬರಕ್ಕಾಗಿ ಕಾಯುತ್ತಿದ್ದರು. ಇದು ದೇಶದಲ್ಲಿನ ರಸಗೊಬ್ಬರ ಬಿಕ್ಕಟ್ಟಿಗೆ ನಿದರ್ಶನವಾಗಿದ್ದು, ಆಡಳಿತ ವ್ಯವಸ್ಥೆಯ ಲೋಪ, ಯೂರಿಯಾ ವಿತರಣೆಯಲ್ಲಿ ಸರ್ಕಾರದ ನಿರ್ವಹಣೆ ಕುರಿತು ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ.
ಭ್ರೂಯಾ ಬಾಯಿ ಅವರು ಯೂರಿಯಾ ಖರೀದಿಸಲು ಬಾಗೇರಿಯಲ್ಲಿರುವ ಗೋದಾಮಿಗೆ ಮಂಗಳವಾರ ತೆರಳಿದ್ದರು. ಹೆಚ್ಚು ಜನರಿದ್ದ ಕಾರಣ ರಾತ್ರಿವರೆಗೆ ಸರತಿಯಲ್ಲಿ ನಿಂತಿದ್ದರು. ಆದರೆ ಗೊಬ್ಬರ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಬುಧವಾರ ಮುಂಜಾನೆ ಮತ್ತೆ ಸರತಿ ಸಾಲಿನಲ್ಲಿ ನಿಂತರು. ನಿರಂತರ ಕೊರೆಯುವ ಚಳಿಯಲ್ಲಿಯೂ ಅವರು ರಾತ್ರಿಯಿಡೀ ಗೋದಾಮಿನ ಹೊರಗೆ ಕಾಯುತ್ತಿದ್ದರು. ಚಳಿಯಿಂದಾಗಿ ಆರೋಗ್ಯ ತೀವ್ರ ಹದಗೆಟ್ಟು ವಾಂತಿ ಮಾಡಿಕೊಂಡು ಕುಸಿದು ಬಿದ್ದರು. ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೂ ಸಿಗಲಿಲ್ಲ ಎಂದು ಹೇಳಲಾಗಿದೆ.
ಆಕೆಯನ್ನು ರೈತರೊಬ್ಬರು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಪ್ರಥಮ ಚಿಕಿತ್ಸೆಯ ಬಳಿ ವೈದ್ಯರು ಗುಣಾ ಜಿಲ್ಲಾ ಆಸ್ಪತ್ರೆಗೆ ಕಳಿಸಿದರು. ಜಿಲ್ಲಾಸ್ಪತ್ರೆ ತಲುಪುವ ವೇಳೆಗೆ ಮೃತಪಟ್ಟಿದ್ದರು.
ರೈತ ರಸಗೊಬ್ಬರ ವಿತರಣಾ ಕೇಂದ್ರ ನಿರ್ವಹಣೆ ಬಗ್ಗೆ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಗೋದಾಮಿನಲ್ಲಿ ಕುಡಿಯುವ ನೀರು ಸೇರಿ ಯಾವುದೇ ವ್ಯವಸ್ಥೆ ಇಲ್ಲ. ಜನರು ದಿನಗಟ್ಟಲೆ ಸರದಿಯಲ್ಲಿ ನಿಂತಿದ್ದಾರೆ. ಮೂರು ದಿನಗಳಿಂದ ಸರತಿಯಲ್ಲಿ ಕಾಯುತ್ತಿದ್ದರೂ ಈವರೆಗೆ ರಸಗೊಬ್ಬರ ಪಡೆಯಲು ಸಾಧ್ಯವಾಗಿಲ್ಲ ಎಂದು ಕಿಡಿ ಕಾರಿದ್ದಾರೆ.


