ಹುಬ್ಬಳ್ಳಿ ನಗರದ ನಂದಗೋಕುಲ ಬಡಾವಣೆಯಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಜಯಶ್ರೀ ಬಡಿಗೇರ್ (31) ಎಂದು ಗುರುತಿಸಲಾಗಿದೆ. ಜಯಶ್ರೀ ಬಿಎ,ಬಿಇಡಿ ಪದವೀಧರೆಯಾಗಿದ್ದು, ಲೈಬ್ರರಿ ಸೈನ್ಸ್ ಕೋರ್ಸ್ ಮಾಡುತ್ತಿದ್ದರು. ಮದುವೆಯಾದ ನಾಲ್ಕೇ ತಿಂಗಳಿಗೆ ಮೃತಪಟ್ಟಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಮಾಡಿ ಬಳಿಕ ನೇಣಿಗೆ ಹಾಕಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಗದಗ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದ ನಿವಾಸಿ ಜಯಶ್ರೀ ಮದುವೆ ಹುಬ್ಬಳ್ಳಿಯ ನಂದಗೋಕುಲ ಬಡಾವಣೆ ನಿವಾಸಿ ಶಿವಾನಂದ್ ಬಡಿಗೇರ್ ಜೊತೆ ಮೇ 21 ರಂದು ಹುಬ್ಬಳ್ಳಿಯಲ್ಲಿ ನಡೆದಿತ್ತು. ವಿವಾಹವಾದ ನಂತರ ಧಾರವಾಡದಲ್ಲಿ ಲೈಬ್ರರಿ ಸೈನ್ಸ್ ಕೋರ್ಸ್ ಗೆ ಪ್ರವೇಶ ಪಡೆದಿದ್ದರು.
ಜಯಶ್ರೀ ಪತಿ ಶಿವಾನಂದ್ ಬಡಿಗೇರ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮದುವೆಯಾಗುವ ಮೊದಲು ಆತ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದ. ಕೆಲವು ದಿನಗಳ ಹಿಂದೆ ಜಯಶ್ರೀಗೆ ಇನಸ್ಟಾಗ್ರಾಂ ನಲ್ಲಿ ಶಿವಾನಂದ್ ಜೊತೆ ತನ್ನ ಪ್ರೀತಿ ಇರುವುದು ತಿಳಿಸಿ, ಪೋಟೋಗಳನ್ನು ಕಳುಹಿಸಿದ್ದಳು ಎನ್ನಲಾಗಿದೆ. ಬಳಿಕ ಶಿವಾನಂದ್, ಜಯಶ್ರೀಗೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಹೆತ್ತವರ ಜೊತೆ ಮಾತನಾಡಲು ಬಿಡುತ್ತಿರಲಿಲ್ಲ, ಈ ಸಂಬಂಧ ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಬೆಳಗಾಗುವುದರಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಅಸಹಜಹ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಶಿವಾನಂದ್ ಬಡಿಗೇರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.