ಗುವಾಹತಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬಿಸಿಸಿಐ ನಿರ್ಧರಿಸಲಿ. ಭಾರತೀಯ ಕ್ರಿಕೆಟ್ ಭವಿಷ್ಯ ಮುಖ್ಯವೇ ಹೊರತು ನಾನಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು 0-2ರಿಂದ ಸೋಲುಂಡಿದ್ದು, ಇದು ಕಳೆದ 25 ವರ್ಷಗಳಲ್ಲೇ ಮೊದಲ ಬಾರಿ ಭಾರತ ತವರಿನಲ್ಲಿ ಸೋಲುಂಡಿದೆ.
ಪಂದ್ಯದ ನಂತರ ಗುವಾಹತಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಅದರಲ್ಲೂ ತಂಡದ ಆಯ್ಕೆ, ಹಿರಿಯ ಆಟಗಾರರ ಕಡೆಗಣನೆ ಸೇರಿದಂತೆ ಹಲವು ಪ್ರಶ್ನೆಗಳಿಂದ ಗಂಭೀರ್ ವಿಚಲಿತರಾದರು.
ಭಾರತ ತಂಡದ ಕೋಚ್ ಆಗಿ ಮುಂದುವರಿಯುವ ಅರ್ಹತೆ ನನಗೆ ಇದೆಯೋ ಇಲ್ಲವೋ ಎಂಬುದನ್ನು ಬಿಸಿಸಿಐ ನಿರ್ಧರಿಸಬೇಕು ಎಂದು ಈ ಹಿಂದೆಯೇ ಹೇಳಿದ್ದೇನೆ. ನಾನು ಇಂಗ್ಲೆಂಡ್ ನಲ್ಲಿ ಗೆಲುವು ಸಾಧಿಸಿದ್ದೇವೆ. ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯನ್ ಕಪ್ ಗೆದ್ದಿದ್ದೇವೆ ಎಂದು ಅವರು ಹೇಳಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 0-2ರಿಂದ ಸೋಲಲು ತಂಡದ ಪ್ರತಿಯೊಬ್ಬ ಆಟಗಾರನೂ ಜವಾಬ್ದಾರಿ ಹೊರಬೇಕು. ಆದರೆ ನಿಂದನೆ ನನ್ನಿಂದ ಆರಂಭವಾಗಿದೆ ಎಂದು ಅವರು ಹೇಳಿದರು.
ಟೆಸ್ಟ್ ಕ್ರಿಕೆಟ್ ಒಬ್ಬ ಆಟಗಾರನ ಕ್ರೀಡೆಯಲ್ಲ. ತಂಡವಾಗಿ ಆಡಬೇಕು. ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕು. ಸೋತಾಗ ಒಬ್ಬನತ್ತ ಬೆರಳು ತೋರುವುದಲ್ಲ. ಸೋತಾಗ ನಿಂದನೆ, ಆರೋಪಗಳು ಸಹಜ ಎಂದು ಗಂಭೀರ್ ಪ್ರತಿಕ್ರಿಯಿಸಿದರು.


