ಬಿಜೆಪಿ ರಾಜ್ಯ ರೈತ ಮೋರ್ಚಾದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನವೆಂಬರ್ 27, 28 ರಂದು ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಗದಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ದೋರಣೆಯನ್ನು ಜನರಿಗೆ ತಿಳಿಸಬೇಕಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸಿಎಂ, ಡಿಸಿಎಂ ನಡುವೆ ಒಳಗುದ್ದಾಟ ನಡೆಯುತ್ತಿದೆ. ಇದರಿಂದ ರಾಜ್ಯದ ರೈತರಿಗೆ, ಜನತೆಗೆ ತೊಂದರೆ ಆಗಿದೆ. ಮೆಕ್ಕೆಜೋಳ, ಹೆಸರು, ಕಬ್ಬು ಬೆಳೆದವರು ಹೋರಾಟ ಮಾಡುತ್ತಿ ದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ಸ್ಫಂದಿಸುತ್ತಿಲ್ಲ ಎಂದರು.
ರೈತರು ಬೀದಿಗಿಳಿಯುವವರೆಗೂ ಸರ್ಕಾರ ಏನು ಮಾಡುತ್ತಿದೆ. ಲಕ್ಷ್ಮೇಶ್ವರದಲ್ಲಿ ನಿರಂತರ ಹೋರಾಟ ಮಾಡಲಾಗುತ್ತಿದೆ. ಮೆಕ್ಕೆಜೋಳಕ್ಕೆ ಕೇಂದ್ರ 2400 ರೂಪಾಯಿ ನಿಗದಿ ಮಾಡಿದೆ. ರಾಜ್ಯ ಸರ್ಕಾರ 600 ರೂಪಾಯಿ ಸೇರಿಸಿ ಕೋಡಬಹುದಿತ್ತು. ಆದರೆ, ರಾಜ್ಯ ಸರ್ಕಾರ ರೈತರ ನೇರವಿಗೆ ಬರುತ್ತಿಲ್ಲ. 2014 ರ ನಂತರ ಕೇಂದ್ರ ಸರ್ಕಾರದ ಭತ್ತ, ಮೆಕ್ಕೆಜೋಳ, ರಾಗಿ, ಶೇಂಗಾ ಸೇರಿ ದಂತೆ ಹಲವಾರು ಬೆಳೆಗಳ ಬೆಲೆಯನ್ನು ಏರಿಕೆ ಮಾಡುತ್ತಾ ಬಂದಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ನಿಗದಿ ಮಾಡಿದ ಎಂ.ಎಸ್.ಪಿ ಗಿಂತ ರಾಜ್ಯ ಸರ್ಕಾರ ಆವರ್ತನಿಧಿ ಮೂಲಕ ಖರೀದಿ ಪ್ರಾರಂಭ ಮಾಡಬಹುದಿತ್ತು. ರಾಜ್ಯ ಸರ್ಕಾರ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ರೈತರಿಗೆ ಮೋಸ ಮಾಡುತ್ತಿದೆ. ಬೆಳೆಹಾನಿಗೆ ಯಾವುದೇ ಪರಿಹಾರ ನೀಡಿಲ್ಲ. ಹಿಂದಿನ ಬಿಜೆಪಿ ಅವಧಿಯಲ್ಲಿ ಬೆಳೆ ಪರಿಹಾರವನ್ನು ನೀಡಲಾಗುತ್ತಿತ್ತು. ಮನೆ ಸಂಪೂರ್ಣ ಹಾನಿಯಾದ ಸಂದರ್ಭದಲ್ಲಿ 5 ಲಕ್ಷ ರೂಪಾಯಿ ವರೆಗೂ ಪರಿಹಾರ ನೀಡಿದ್ದೇವೆ. ಈಗಿರುವ ಸರ್ಕಾರ ಕೇವಲ 1.20ಲಕ್ಷ ಹಣ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 6000 ನೀಡಲಾಗುತ್ತಿದೆ. ಯಡಿಯೂರಪ್ಪನವರ ಅವಧಿಯಲ್ಲಿ 4000 ಸಾವಿರ ಸೇರಿಸಿ 10,000 ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದ ನಂತರ 4000 ರೂ ಕಡಿತಗೋಳಿಸಿದರು. ಈ ಮೂಲಕ ರೈತರಿಗೆ ಮಹಾಮೋಸ ಮಾಡಿದ್ದಾರೆ. ಇಂತಹ ಭಂಡ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡಿಲ್ಲ. ರಸ್ತೆಯ ಗುಂಡಿಯನ್ನು ಮುಚ್ಚುವ ಯೋಗ್ಯತೆ ಸರ್ಕಾರಕ್ಕಿಲ್ಲ. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದರು.
ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ವಿಧಾನಪರಿಷತ್ ಸದಸ್ಯ ಎಸ್ ವ್ಹಿ ಸಂಕನೂರ, ಶಶಿಮೌಳಿ ಕುಲಕರ್ಣಿ, ಬಸವರಾಜ ಅಂಕೋಜಿ, ಲಿಂಗರಾಜಗೌಡ ಪಾಟೀಲ, ಆರ್. ಕೆ ಚೌವ್ಹಾಣ್, ವಿಜಯಲಕ್ಷ್ಮೀ ಮಾನ್ವಿ, ಉಷಾ ದಾಸರ, ರವಿ ದಂಡಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


