ಹಾಸನದ ಆಲೂರು ತಾಲೂಕಿನ ಸಂತೆಬಸವನಹಳ್ಳಿ ಗ್ರಾಮದಲ್ಲಿ ಮಗನನ್ನು ತಂದೆಯೇ ಕೊಂದು ಹೂತು ಹಾಕಿದ್ದು, ತಂದೆಯ ಸಾವಿನ ಬಳಿಕ ಆ ಕೊಲೆಯ ರಹಸ್ಯ ಬಯಲಾಗಿದೆ.
ಗಂಗಾಧರ್ ಎಂಬಾತ ಹತ್ತು ದಿನಗಳ ಹಿಂದೆ ಮೃತಪಟ್ಟಿದ್ದು, ಸಂಬಂಧಿಕರು ಹಿರಿಯ ಮಗ ರಘುವನ್ನು ಅಂತ್ಯಸಂಸ್ಕಾರಕ್ಕೆ ಕರೆಸುವಂತೆ ಒತ್ತಾಯಿಸಿದ್ದಾರೆ. ಮೃತರ ಸಣ್ಣ ಮಗ ರೂಪೇಶ್ ಅಣ್ಣನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಅಂತ ಹೇಳಿ ಬೇರೆ ನಂಬರ್ ಕೊಟ್ಟಿದ್ದ. ಆದರೆ ಸಂಬಂಧಿಕರು ಹಾಲು ಬಿಡುವ ಮೂರನೇ ದಿನಕ್ಕಾದರೂ ರಘನನ್ನು ಕರೆಸಲೇಬೇಕೆಂದು ರೂಪೇಶ್ಗೆ ಒತ್ತಡ ಹಾಕಿದ್ದಾರೆ. ಆಗ ರೂಪೇಶ್ ಅನಿವಾರ್ಯವಾಗಿ ಸತ್ಯ ವಿಚಾರವನ್ನು ಸಂಬಂಧಿಕರಿಗೆ ಹೇಳಿದ್ದಾನೆ.
ರಘು ನಾಪತ್ತೆ ಆಗಿಲ್ಲ. ಆಗಸ್ಟ್ 14, 2023 ರಂದು ತಂದೆಯೇ ಅಣ್ಣನ ಕೊಲೆ ಮಾಡಿ ಮನೆಯ ಹಿಂಭಾಗ ಇರುವ ಇಂಗು ಗುಂಡಿಯಲ್ಲಿ ಶವ ಹೂತು ಹಾಕಿದ್ದಾರೆ ಎಂದು ರೂಪೇಶ್ ಹೇಳಿದ್ದಾನೆ. 32 ವರ್ಷದ ರಘುವಿಗೆ ಮದುವೆ ಆಗಿದ್ದು 5 ವರ್ಷದ ಮಗುವಿದೆ. ಹೆಂಡತಿಗೆ ವಿಚ್ಛೇದನ ನೀಡಿದ್ದ. ಕುಡಿತದ ಚಟಕ್ಕೆ ಬಿದ್ದ ರಘು ಕುಡಿಯಲು ಹಣ ಕೊಡುವಂತೆ ತಂದೆಗೆ ಪೀಡಿಸುತ್ತಿದ್ದನಂತೆ. ಇದರಿಂದ ಬೇಸತ್ತ ತಂದೆ ಮಗನ ಕೊಲೆ ಮಾಡಿದ್ದಾರೆ. ಯಾರಿಗೂ ಗೊತ್ತಾಗಬಾರದು ಎಂದು ಮನೆಯ ಹಿಂಭಾಗದಲ್ಲಿ ಇರುವ ಇಂಗು ಗುಂಡಿಯಲ್ಲಿ ಶವ ಹೂತು ಹಾಕಿದ್ದರು. ಕಿರಿಯ ಮಗ ರೂಪೇಶ್ಗೆ ಈ ವಿಚಾರ ಯಾರಿಗೂ ಹೇಳದಂತೆ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ ಈ ವಿಚಾರವನ್ನು ಯಾರ ಬಳಿಯೂ ಹೇಳಿಲ್ಲ ಎಂದು ಸ್ವಲ್ಪ ಬುದ್ಧಿಮಾಂದ್ಯನಾಗಿರುವ ರೂಪೇಶ್ ಸಂಬಂಧಿಕರ ಬಳಿ ಹೇಳಿದ್ದಾರೆ.
ಈ ಬಗ್ಗೆ ಗಂಗಾಧರನ ಸಂಬಂಧಿ ಪಾಲಾಕ್ಷ ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಇಂಗು ಗುಂಡಿಯಿಂದ ರಘುವಿನ ದೇಹದ ಮೂಳೆಗಳನ್ನು ಹೊರತೆಗೆದಿದ್ದಾರೆ. ಈ ಮೂಳೆಗಳನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ತನಿಖೆ ಮುಂದುವರಿದಿದ್ದು, ಈ ಘಟನೆಯು ಸ್ಥಳೀಯರಲ್ಲಿ ಆಘಾತವನ್ನುಂಟು ಮಾಡಿದೆ.