Menu

ಕಾಳಿಂಗ ಸರ್ಪಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲು ತಂಡ ನೇಮಕ: ಸಚಿವ ಈಶ್ವರ ಖಂಡ್ರೆ

ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯದೊಳಗೆ ಬಿಡಲು ವಿಶೇಷ ತಂಡವನ್ನು ರಚಿಸುವಂತೆ ಸಚಿವ ಈಶ್ವರ್‌ ಖಂಡ್ರೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, .ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲು ಖಾಸಗಿ ಸಂಸ್ಥೆಗಳ ಮೊರೆ ಹೋಗದೆ ಅರಣ್ಯ ಇಲಾಖೆಯ ವಿಭಾಗದ 5 ಸಿಬ್ಬಂದಿಗೆ ತರಬೇತಿ ನೀಡುವಂತೆ ಹೇಳಿದ್ದಾರೆ.

ಕಾಳಿಂಗ ಸರ್ಪ ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಉಡುಪಿ ಭಾಗದಲ್ಲಿ ಜನವಸತಿ ‌ಪ್ರದೇಶ ಸೇರಿದಂತೆ ಮನೆಯೊಳಗೆ, ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತದೆ. ಇದಕ್ಕೆ ಪರಿಹಾರವಾಗಿ ಉರಗ ತಜ್ಞರು ಮತ್ತು ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸುವ ಅಗತ್ಯವಿಲ್ಲ, ಕಾಳಿಂಗ ಸರ್ಪವನ್ನು ಹಿಡಿಯಲು ಮತ್ತು ಸುರಕ್ಷಿತವಾಗಿ ಕಾಡಿಗೆ ಬಿಡಲು ನಮ್ಮದೇ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಒಬ್ಬ ಪ್ರಾದೇಶಿಕ ಅರಣ್ಯಾಧಿಕಾರಿ ಯೊಂದಿಗೆ ತರಬೇತಿ ಪಡೆತ 5 ಜನರ ತಂಡವನ್ನು ನೇಮಿಸಬೇಕು. ಈಗಾಗಲೆ ರಚಿಸಿರುವ ETF ಮತ್ತು LTF ಮಾದರಿಯಲ್ಲೇ ಕಾಳಿಂಗ ಸರ್ಪ ಹಿಡಿಯಲೂ ತಂಡ ರಚಿಸುವುದರಿಂದ ಸರ್ಪಗಳ ಸೆರೆ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ತಪ್ಪಿಸ ಬಹುದು ಎಂದು ಸಚಿವರು ತಿಳಿಸಿದ್ದಾರೆ.

ಆಗುಂಬೆಯಲ್ಲಿರುವ ಕಾಳಿಂಗ ಮನೆಯ ವಿರುದ್ಧ ದೂರು ದಾಖಲಾಗಿತ್ತು. ಅದರೊಂದಿಗೆ ಪರಿಸರ ಸೂಕ್ಷ್ಮ ವಲಯದಲ್ಲಿ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿದ ಮತ್ತು ಸಂಶೋಧನಾ ಅನುಮತಿಗಳನ್ನು ದುರುಪಯೋಗಪಡಿಸಿಕೊಂಡ ಆರೋಪವೂ ಕೇಳಿ ಬಂದಿತ್ತು. ಇಂತಹ ಎಲ್ಲಾ ಚಟುವಟಿಕೆಗಳನ್ನು ಹತೋಟಿಗೆ ತರುವ ಭಾಗವಾಗಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ತಂಡವನ್ನೇ ನೇಮಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *