Menu

ಕೋಲಾರದಲ್ಲಿ ಆಗಾಗ ತವರುಮನೆಗೆ ಹೋಗುತ್ತಿದ್ದಳೆಂದು ಪತ್ನಿಯ ಕೊಲೆಗೈದ ಪತಿ

ಕೋಲಾರದ ಜನ್ನಘಟ್ಟ ಗ್ರಾಮದಲ್ಲಿ ಆಗಾಗ ತವರು ಮನೆಗೆ ಹೋಗಿ ಬರುತ್ತಿದ್ದ ಪತ್ನಿಯ ಮೇಲೆ ಅನುಮಾನ ಪಟ್ಟ ಪತಿ ಆಕೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಂದ ಗಂಡ ಸಹಜ ಸಾವೆಂದು ಬಿಂಬಿಸಲು ಹೊರಟಿದ್ದ. ಅನುಮಾನಗೊಂಡ ಮೃತಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಜನ್ನಘಟ್ಟ ಗ್ರಾಮದಲ್ಲಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ ಶಿವರಾಜ್ ಹೆಂಡತಿ ಕಾವ್ಯ ಮೇಲೆ ಅನುಮಾನ ಪಟ್ಟು ಆಕೆಯೊಂದಿಗೆ ಜಗಳ ಆರಂಭಿಸಿದ್ದ. ಇಬ್ಬರ ಗಲಾಟೆ ತೀವ್ರಗೊಂಡು, ಶಿವರಾಜ್ ಪತ್ನಿಗೆ ಹೊಡೆದಿದ್ದ. ಆಗ ಆಕೆ ಕೂಡ ಗಂಡನಿಗೆ ಹೊಡೆದಿದ್ದಳು. ಇದರಿಂದ ಕೋಪಗೊಂಡ ಆತ ಪತ್ನಿಯನ್ನು ನೆಲಕ್ಕೆ ಬೀಳಿಸಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆ ಮಾಡಿ ಹೊರಗಡೆ ಸುತ್ತಾಡಿಕೊಂಡಿದ್ದ ಶಿವರಾಜ್, ಸಂಜೆ ಮನೆಗೆ ಬಂದು ಹೆಂಡತಿ ಉಸಿರಾಡುತ್ತಿಲ್ಲ ಎಂದು ನಾಟಕವಾಡಿದ್ದ. ಅಕ್ಕಪಕ್ಕದ ಮೆನಯವರ ನೆರವಿನೊಂದಿಗೆ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದ. ವೈದ್ಯರು ಆಕೆ ಮೃತಪಟ್ಟು ನಾಲ್ಕೈದು ಗಂಟೆಗಳಾಗಿವೆ ಎಂದಿದ್ದರು. ಇದರಿಂದ ಅನುಮಾನಗೊಂಡ ಆಕೆಯ ಪೊಷಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶಿವರಾಜ್​ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹೆಂಡತಿಯ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬೆಂಗಳೂರು ವಿಲ್ಸನ್ ಗಾರ್ಡನ್​ ನಿವಾಸಿಯಾಗಿದ್ದ ಕಾವ್ಯಾ ಮತ್ತು ಜನ್ನಘಟ್ಟ ಗ್ರಾಮದ ಶಿವರಾಜ್​ ಮದುವೆ ಎಂಟು ವರ್ಷಗಳ ಹಿಂದೆ ನಡೆದಿತ್ತು. ದಂಪತಿಗೆ 7 ವರ್ಷದ ಮಗಳೂ ಇದ್ದಾಳೆ. ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯಲಾರಂಭಿಸಿತ್ತು. ಇತ್ತೀಚಿಗೆ ಹೆಂಡತಿ ಪದೇ ಪದೆ ತವರು ಮನೆಗೆ ಹೋಗುತ್ತಾಳೆ ಎಂದು ಅನುಮಾನ ಪಡುತ್ತಿದ್ದ ಪತಿ, ಗಂಡು ಮಗುವಾಗಿಲ್ಲ ಎಂದೂ ಆಕೆಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ತವರು ಮನೆಯಿಂದ ಹಣ ತೆಗೆದುಕೊಂಡು ಬರುವಂತೆ ಶಿವರಾಜ್ ಹೆಂಡತಿಗೆ ಹೊಡೆಯುತ್ತಿದ್ದ ಎಂದೂ ಆರೋಪಿಸಲಾಗಿದೆ. ರಾಜಿ ಪಂಚಾಯ್ತಿಯ ನಂತರವೂ ಗಂಡನಿಗೆ ಹೆಂಡತಿ ಮೇಲಿದ್ದ ಅನುಮಾನ ಕಡಿಮೆಯಾಗದೆ ಮಗುವನ್ನು ಶಾಲೆಗೆ ಕಳಿಸಿದ ನಂತರ ಹೆಂಡತಿಯೊಂದಿಗೆ ಮತ್ತೆ ಜಗಳವಾಡಿ ಹೊಡೆಯಲು ಮುಂದಾದ ಹೆಂಡತಿಯನ್ನು ಕತ್ತುಹಿಸುಕಿ ಕೊಲೆ ಮಾಡಿದ್ದಾನೆಂದು ಎಂದು ದೂರಿನಲ್ಲಿ ಹೇಳಲಾಗಿದೆ.

Related Posts

Leave a Reply

Your email address will not be published. Required fields are marked *