ಇಸ್ರೇಲ್ ಗಾಜಾದ ಮೇಲೆ ಮತ್ತೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 24 ಪ್ಯಾಲೆಸ್ತೀನಿಯರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಎರಡು ವರ್ಷಗಳ ಯುದ್ಧದ ನಂತರ ಅಕ್ಟೋಬರ್ 10 ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆಯಾಗಿತ್ತು. ಆದರೆ ಇಸ್ರೇಲ್ ಗಾಜಾ ಮೇಲೆ ದಾಳಿ ನಡೆಸಿ, ದಕ್ಷಿಣ ಗಾಜಾದಲ್ಲಿ ತನ್ನ ಸೈನಿಕರ ಮೇಲೆ ಹಮಾಸ್ ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.
ಕದನ ವಿರಾಮ ಜಾರಿಗೆ ಬಂದಾಗಿನಿಂದ ಇಸ್ರೇಲ್ ಸೇನೆ ನಡೆಸಿದ ದಾಳಿಗೆ 312 ಪ್ಯಾಲೆಸ್ಟೀನಿಯನ್ನರು ಬಲಿಯಾಗಿದ್ದಾರೆ. ಈ ಮೂಲಕ ಇಸ್ರೇಲ್ ಹಮಾಸ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಹಮಾಸ್ ಆಡಳಿತದ ಆರೋಗ್ಯ ಸಚಿವಾಲಯ ಹೇಳಿದೆ. ಇದನ್ನು ಇಸ್ರೇಲ್ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವಂತೆ ಕರೆ ನೀಡಿದೆ.
ಗಾಜಾದಲ್ಲಿ ಯುದ್ಧ ಅಂತ್ಯಗೊಂಡಿದ್ದು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಘೋಷಣೆ ಮಾಡಿದ್ದರು. ಹಮಾಸ್ ಒತ್ತೆಯಾಳುಗಳ ಬಿಡುಗಡೆಗೂ ಮೊದಲು ಪಶ್ಚಿಮ ಏಷ್ಯಾಕ್ಕೆ ಟ್ರಂಪ್ ತೆರಳಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಗಿದಿದೆ. ಈ ಯುದ್ಧ ನಿಲ್ಲಿಸಿದ್ದರಿಂದ ಯಹೂದಿಗಳು, ಮುಸ್ಲಿಮರು ಅಥವಾ ಅರಬ್ ದೇಶದವರು ಎಲ್ಲರೂ ಸಂತೋಷವಾಗಿದ್ದಾರೆ ಎಂದು ಹೇಳಿದ್ದರು.


