Menu

ಬಿಹಾರದ ಏಳು ಜಿಲ್ಲೆಗಳ ತಾಯಿ ಎದೆಹಾಲಿನಲ್ಲಿ ವಿಷಕಾರಿ ಯುರೇನಿಯಂ

ಪಾಟ್ನಾದ ಮಹಾವೀರ ಕ್ಯಾನ್ಸರ್ ಸಂಸ್ಥಾನ, ನವದೆಹಲಿಯ ಏಮ್ಸ್ ಮತ್ತು ಜೀವರಸಾಯನಶಾಸ್ತ್ರ ವಿಭಾಗದ ಸಂಶೋಧಕರ ಒಕ್ಕೂಟ ನಡೆಸಿರುವ ಅಧ್ಯಯನವೊಂದರಲ್ಲಿ ಬಿಹಾರದ ಏಳು ಜಿಲ್ಲೆಗಳ ತಾಯಂದಿರ ಎದೆಹಾಲಿನಲ್ಲಿ ವಿಷಕಾರಿ ಯುರೇನಿಯಂ ಪತ್ತೆಯಾಗಿದೆ.

ಬಿಹಾರದಲ್ಲಿ ನಡೆದ ಮಹತ್ವದ ವೈದ್ಯಕೀಯ-ವೈಜ್ಞಾನಿಕ ಅಧ್ಯಯನ ಇದಾಗಿದ್ದು, ಆಘಾತಕಾರಿ ಮಾಹಿತಿಯೊಂದನ್ನು ಹೊರ ಹಾಕಿದೆ. ಮಕ್ಕಳಿಗೆ ಸಂಜೀವಿನಿಯಾಗಬೇಕಿದ್ದ ತಾಯಿಯ ಎದೆಹಾಲಿನಲ್ಲೇ ವಿಷಕಾರಿ ಯುರೇನಿಯಂ ಪತ್ತೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಪಾಟ್ನಾದ ಮಹಾವೀರ ಕ್ಯಾನ್ಸರ್ ಸಂಸ್ಥಾನ, ನವದೆಹಲಿಯ ಏಮ್ಸ್ ಮತ್ತು ಜೀವರಸಾಯನಶಾಸ್ತ್ರ ವಿಭಾಗದ ಸಂಶೋಧಕರ ಒಕ್ಕೂಟ ಅಕ್ಟೋಬರ್ 2021ರಿಂದ ಜುಲೈ 2024ರವರೆಗೆ ಈ ಅಧ್ಯಯನ ನಡೆಸಿವೆ. ಏಮ್ಸ್‌ನ ಡಾ. ಅಶೋಕ್ ಶರ್ಮಾ, ಡಾ. ಅರುಣ್ ಕುಮಾರ್, ಪ್ರೊ. ಅಶೋಕ್ ಘೋಷ್ ನೇತೃತ್ವದಲ್ಲಿ ನಡೆದಿದೆ. ಬಿಹಾರದ ಭೋಜ್‌ಪುರ, ಸಮಷ್ಟಿಪುರ, ಬೇಗುಸರಾಯ, ಖಗರಿಯಾ, ಕಟಿಹಾರ್ ಮತ್ತು ನಳಂದ ಈ ಆರು ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ತಾಯಂದಿರ ಎದೆಹಾಲಿನ ಮಾದರಿ ಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. 17 ರಿಂದ 35 ವರ್ಷದೊಳಗಿನ 40ಕ್ಕೂ ಹೆಚ್ಚು ತಾಯಂದಿರ ಎದೆಹಾಲಿನ ಮಾದರಿಗಳನ್ನು ಪರೀಕ್ಷಿಸಿದಾಗ ಪ್ರತಿಯೊಂದು ಮಾದರಿಯಲ್ಲೂ ಯುರೇನಿಯಂ ಪತ್ತೆಯಾಗಿರುವುದು ಸಂಶೋಧಕರನ್ನೇ ದಿಗ್ಭ್ರಮೆಗೊಳಿಸಿದೆ. ಮಾದರಿಗಳಲ್ಲಿನ ಯುರೇನಿಯಂ ಸಾಂದ್ರತೆ 0 ರಿಂದ 5.25 ಗ್ರಾಂ/ಲೀಟರ್ ವರೆಗೆ ದಾಖಲಾಗಿದೆ.

ಕೊಳವೆಬಾವಿ ಮತ್ತು ಅಂತರ್ಜಲದ ಮಾಲಿನ್ಯದ ಕಅರಣದಿಂದ ಯುರೇನಿಯಂ ಎದೆಹಾಲಿನಲ್ಲಿ ಸೇರಿಕೊಂಡಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ. ಬಿಹಾರದಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ 80%ಕ್ಕಿಂತ ಹೆಚ್ಚು ಅಂತರ್ಜಲವೇ ಆಧಾರ. ರಾಸಾಯನಿಕ ಗೊಬ್ಬರ, ಕೀಟನಾಶಕಗಳ ದುರುಪಯೋಗ, ಕೈಗಾರಿಕಾ ತ್ಯಾಜ್ಯ ಇವೆಲ್ಲವೂ ನೀರನ್ನು ವಿಷಯುಕ್ತಗೊಳಿಸಿವೆ. ಆರ್ಸೆನಿಕ್, ಸೀಸ, ಪಾದರಸ ಮಾಲಿನ್ಯದಿಂದ ಕೂಡಿದ ಬಿಹಾರಕ್ಕೆ ಯುರೇನಿಯಂ ಸೇರ್ಪಡೆ ಆತಂಕ ಹೆಚ್ಚಿಸಿದೆ.

ಯುರೇನಿಯಂನ ನಿಖರ ಮೂಲ ಯಾವುದೆಂಬುದು ಇನ್ನೂ ಖಚಿತಗೊಂಡಿಲ್ಲ, ಆದರೆ ಅದು ತಾಯಿಯ ದೇಹದಲ್ಲಿ ಸಂಗ್ರಹವಾಗಿ ಎದೆಹಾಲು ಮೂಲಕ ಶಿಶುವಿಗೆ ತಲುಪುತ್ತಿದೆ ಎಂಬುದು ಬಹಳ ಗಂಬೀರ ಮತ್ತು ಆತಂಕದ ವಿಚಾರ ಎಂದು ಏಮ್ಸ್‌ನ ಡಾ. ಅಶೋಕ್ ಶರ್ಮಾ ಎಚ್ಚರಿಕೆ ನೀಡಿದ್ದಾರೆ. ಶಿಶುಗಳು ವಯಸ್ಕರಿಗಿಂತ ಯುರೇನಿಯಂನ ಹಾನಿಕಾರಕ ಪರಿಣಾಮಗಳಿಗೆ ಹೆಚ್ಚು ಗುರಿಯಾಗುತ್ತವೆ, ಏಕೆಂದರೆ ಅಂಗಗಳು ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತವೆ ಎಂದು ತಿಳಿಸಿದ್ದಾರೆ.

ಯುರೇನಿಯಂ ಮೂತ್ರಪಿಂಡವನ್ನು ಗಂಭೀರವಾಗಿ ಹಾನಿಗೊಳಿಸಬಲ್ಲದು ಮತ್ತು ನರವೈಜ್ಞಾನಿಕ ದುರ್ಬಲತೆಗೆ ಕಾರಣವಾಗುವುದು, ಶಿಶುಗಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಮಂದಗೊಳ್ಳುವ ಸಾಧ್ಯತೆ ಇದೆ. ನಾನಾ ಬಗೆಯ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ. ಆದರೂ ತಾಯಂದಿರು ವೈದ್ಯಕೀಯ ಸಲಹೆ ಇಲ್ಲದೆ ಸ್ತನ್ಯಪಾನ ನಿಲ್ಲಿಸಬಾರದು ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *