ಬೆಂಗಳೂರಿನ ಕೋರಮಂಗಲದಲ್ಲಿರುವ ಕಾಲ್‌ಸೆಂಟರ್‌ನಿಂದ ಉದ್ಯೋಗಿಗಳನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂಟು ಆರೋಪಿಗಳನ್ನು 12 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಒಬ್ಬನಾಗಿರುವ ಚಲಪತಿ ಕೋಲಾರ ಜಿಲ್ಲೆಯ ಕಾನ್‌ಸ್ಟೇಬಲ್. ಈತನ ತಂಡ ಕೋರಮಂಗಲ ಕಾಲ್‌ಸೆಂಟರ್ ಗೆ ಹೋಗಿ ನಾಲ್ವರನ್ನು ಕರೆದು ನಾವು ಪೊಲೀಸರು ಎಂದು ಬೆದರಿಸಿದ್ದಾರೆ. ಬಳಿಕ ಪವನ್, ರಾಜ್ ವೀರ್, ಆಕಾಶ್, ಅನಸ್ ಎಂಬವರನ್ನು ಕಾರಿನಲ್ಲಿ ಅಪಹರಿಸಿದ್ದಾರೆ.
ಪೊಲೀಸರಿಗೆ ಬಿಪಿಒ ಸಿಬ್ಬಂದಿ ವಿಚಾರ ತಿಳಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ಕು ತಂಡವಾಗಿ ಶೋಧ ಆರಂಭಿಸಿದ್ದರು. ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳು 25 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆಪರೇಷನ್ ಮ್ಯಾನೇಜರ್ ಅಕೌಂಟ್‌ನಿಂದ 18 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದರು. ಹೊಸಕೋಟೆಯ ಲಾಡ್ಜ್‌ನಲ್ಲಿ ನಾಲ್ವರನ್ನು ಆರೋಪಿಗಳು ಕೂಡಿ ಹಾಕಿದ್ದರು.
ಜಾಗ ಪತ್ತೆ ಹಚ್ಚಿದ ಪೊಲೀಸರು ಉದ್ಯೋಗಿಗಳನ್ನು ರಕ್ಷಿಸಿ, 8 ಆರೋಪಿಗಳನ್ನು ಬಂಧಿಸಿ, ಎರಡು ಕಾರುಗಳನ್ನು ಸೀಜ್ ಮಾಡಿದ್ದಾರೆ. ಕಂಪನಿಯ ಮ್ಯಾನೇಜರ್ ಲೆವೆಲ್‌ನ ನಾಲ್ಕು ಸಿಬ್ಬಂದಿಯನ್ನು 8 ಜನ ಬಂದು ಮಾತನಾಡಿಸಿ. ಪೊಲೀಸ್ ಎಂದು ಹೇಳಿ ಮಾಹಿತಿ ಕೇಳಿದ್ದಾರೆ. ಕೆಳಗೆ ಕರೆದುಕೊಂಡು ಬಂದು ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಆರೋಪಿಗಳು ದುಡ್ಡಿಗೆ ಬೇಡಿಕೆ ಇಟ್ಟಿದ್ದಾರೆ. ಮ್ಯಾನೇಜರ್ ಅಕೌಂಟ್‌ನಿಂದ ಆರೋಪಿಗಳ ಸಂಬಂಧಿಕರ ಖಾತೆಗೆ 18.90 ಲಕ್ಷ ಹಣ ರ್ಗಾವಣೆ ಮಾಡಿದ್ದಾರೆ. ಆರೋಪಿಗಳಲ್ಲಿ ಬಹುತೇಕರು ಕೋಲಾರ ಮೂಲದವರು. ಹೆಚ್ಚಿನ ತನಿಖೆ ಮುಂದುವರಿಸಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.


