ನಕಲಿ ಗುರೂಜಿ ಬಳಿ ಬೆಂಗಳೂರಿನ ಟೆಕ್ಕಿಯೊಬ್ಬರು ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಹೋಗಿ 48 ಲಕ್ಷ ರೂಪಾಯಿ ಜೊತೆ ಆರೋಗ್ಯವನ್ನೂ ಕಳೆದುಕೊಂಡಿರುವ ಪ್ರಕರಣ ನಡೆದಿದೆ.
‘ದೇವರಾಜ್ ಬೂಟಿ’ ಎಂಬ ದುಬಾರಿ ಔಷಧಿಯನ್ನು ಖರೀದಿಸಿ ಸೇವಿಸಿದ್ದರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಜಾನ್ಞಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟೆಕ್ಕಿ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಕೆಂಗೇರಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆಸ್ಪತ್ರೆಯಿಂದ ಬರುವಾಗ ರಸ್ತೆಬದಿಯಲ್ಲಿರುವ ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ನೀಡುವುದಾಗಿ ಪ್ರಕಟಿಸಿದ್ದ
ಟೆಂಟ್‌ಗೆ ಭೇಟಿ ನೀಡಿದ್ದಾರೆ. ಈ ಟೆಂಟ್‌ನಲ್ಲಿದ್ದ ವಿಜಯ್ ಗುರೂಜಿ ಎಂಬಾತ ಆಯುರ್ವೇದಿಕ ಔಷಧಿ ನೀಡುವುದಾಗಿ ಹೇಳಿದ್ದಾನೆ.
ಗುರೂಜಿ “ದೇವರಾಜ್ ಬೂಟಿ”ಎಂಬ ಹೆಸರಿನ ಔಷಧಿ ತೆಗೆದುಕೊಳ್ಳುವಂತೆ ಹೇಳಿ 1 ಗ್ರಾಂ ಔಷಧಿಗೆ 1,60,000 ಬೆಲೆ ನಿಗದಿ ಮಾಡಿದ್ದ. ಔಷಧಿಯನ್ನು ಯಶವಂತಪುರ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್‌ನಿಂದ ಮಾತ್ರ ಖರೀದಿಸಬೇಕು ಎಂದು ಒತ್ತಾಯಿಸಿದ್ದಾನೆ. ಔಷಧಿ ಖರೀದಿ ವೇಳೆ ಆನ್‌ಲೈನ್ ಪೇಮೆಂಟ್ ಮಾಡಬಾರದು ಮತ್ತು ಜೊತೆಗೆ ಯಾರನ್ನು ಕರೆದುಕೊಂಡು ಬರಬಾರದು ಎಂದೂ ಎಚ್ಚರಿಕೆ ನೀಡಿದ್ದ.
ದೇವರಾಜ್ ಬೂಟಿ ಜೊತೆಯಲ್ಲಿ ಭವನ ಬೂಟಿ ಎಂಬ ತೈಲವನ್ನು ಒಟ್ಟು 17 ಲಕ್ಷ ರೂಪಾಯಿ ಖರ್ಚು ಮಾಡಿ ಶ್ರೇಯಸ್ ಖರೀದಿಸಿದ್ದಾರೆ. ಸಮಸ್ಯೆ ಪರಿಹಾರವಾಗದಿದ್ದಾಗ ಬ್ಯಾಂಕ್‌ನಲ್ಲಿ 20 ಲಕ್ಷ ಲೋನ್ ತೆಗೆದು ಮತ್ತೆ 18 ಗ್ರಾಂ ಔಷಧಿ ಖರೀದಿಸಿದ್ದಾರೆ.
ದೇವರಾಜ್ ಬೂಟಿ ಮತ್ತು ಭವನ ಬೂಟಿ ತೈಲ ತೆಗೆದುಕೊಳ್ಳುತ್ತಿರುವಾಗ ಆರೋಗ್ಯ ಕ್ಷೀಣಿಸುತ್ತಿರುವುದು ಶ್ರೇಯಸ್ ಅರಿವಿಗೆ ಬಂದಿದೆ. ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಸಮಸ್ಯೆಗೆ ಆಗಿರುವುದು ಪತ್ತೆಯಾಗಿದೆ. ಕಿಡ್ನಿ ಸಮಸ್ಯೆಗೆ ತೆಗೆದುಕೊಳ್ಳುತ್ತಿರುವ ಔಷಧಿ ಕಾರಣ ಎಂದು ತಿಳಿದು ಬಂದಿದೆ.
ಟೆಕ್ಕಿಯು ವಿಜಯ್ ಗೂರೂಜಿ, ವಿಜಯಲಕ್ಷ್ಮಿ ಆಯುರ್ವೇದಿಕ್ ವಿರುದ್ಧ ಜಾನ್ಞಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳು ಪರಾರಿಯಾಗಿದ್ದಾರೆ ಮತ್ತು ಅವರನ್ನು ಬಂಧಿಸಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ.


