ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ವೀಡಿಯೊ ವೈರಲ್ ಪ್ರಕರಣ ಸಂಬಂಧ ತನಿಖೆ ತೀವ್ರಗೊಂಡಿದ್ದು, ವೀಡಿಯೊದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಈಗ ಜೈಲಿಂದ ಹೊರಗಿರುವ ರೌಡಿಶೀಟರ್ನ ವಿಚಾರಣೆ ನಡೆದಿದೆ.
ಜೈಲಿನಿಂದ ಬಿಡುಗಡೆಯಾಗಿದ್ದ ಮಂಜುನಾಥ್ ಅಲಿಯಾಸ್ ಕುದುರೆ ಮಂಜನ ವಿಚಾರಣೆ ನಡೆಸಿರುವ ಪೊಲೀಸರಲ್ಲಿ ತಾನು ಜೈಲಿನಲ್ಲಿ ಡ್ಯಾನ್ಸ್ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದು, ವೀಡಿಯೊವನ್ನು ಗುಬ್ಬಚ್ಚಿ ಸೀನ, ವಿಲ್ಸನ್ ಗಾರ್ಡನ್ ನಾಗನಿಗೆ ಶೇರ್ ಮಾಡಿದ್ದ ಎಂಬುದು ತಿಳಿದು ಬಂದಿದೆ.
ಮಂಜನ ಹೇಳಿಕೆಯಿಂದಾಗಿ ಕೋರ್ಟ್ ಅನುಮತಿ ಪಡೆದು ಪೊಲೀಸರು ವಿಚಾರಣೆ ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗನ ವಿಚಾರಣೆ ನಡೆಸಲಿದ್ದಾರೆ. ಗುಬ್ಬಚ್ಚಿ ಸೀನ ಮತ್ತು ನಾಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು ಈ ಹಿಂದೆ ದರ್ಶನ್ ಜತೆ ಇವರಿಬ್ಬರೂ ರಾಜಾತಿಥ್ಯ ಪಡೆದಿದ್ದರು. ಬಳಿಕ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಕೋರ್ಟ್ ಅನುಮತಿ ಕೊಟ್ರೆ ಪರಪ್ಪನ ಅಗ್ರಹಾರ ಠಾಣೆಗೆ ಕರೆತಂದು ಇಬ್ಬರನ್ನೂ ಪೊಲೀಸರು ವಿಚಾರಣೆ ಮಾಡಲಿದ್ದಾರೆ ಎನ್ನಲಾಗಿದೆ.
ಕೊಲೆ ಆರೋಪಿ ದರ್ಶನ್ ಆಪ್ತ ಧನ್ವೀರ್ ಸೇರಿ ಹಲವರ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ನಾನು ಯಾರಿಗೂ ವೀಡಿಯೊ ಶೇರ್ ಮಾಡಿಲ್ಲ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಮಾತ್ರ ಶೇರ್ ಮಾಡಿದ್ದಾಗಿ ತಿಳಿಸಿದ್ದರು. ಆದರೆ ಕುದುರೆ ಮಂಜನ ಹೇಳಿಕೆಯಿಂದಾಗಿ ವಿಜಯಲಕ್ಷ್ಮೀ ಸಂಕಷ್ಟದಿಂದ ಪಾರಾಗಿದ್ದಾರೆ. ಪೊಲೀಸರ ತನಿಖೆ ಮುಂದುವರಿದಿದ್ದು, ವೀಡಿಯೊ ವೈರಲ್ ಕೇಸ್ ಇನ್ನೂ ಹಲವರಿಗೆ ಸಂಕಷ್ಟ ತಂದೊಡ್ಡಲಿದೆ ಎನ್ನಲಾಗಿದೆ.


