ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರದೇಶವಾಗಿರುವ ಮೂಲೆಹೊಳೆ ಚೆಕ್ ಪೋಸ್ಟ್ ಸಮೀಪ ಆಭರಣ ತಯಾರಕ ವಿನು ಅವರ 1.3 ಕೆಜಿಗೂ ಹೆಚ್ಚು ಚಿನ್ನವನ್ನು ದರೋಡೆ ಮಾಡಿ ಕಾರು ಸಹಿತ ಆರೋಪಿಗಳು ಪರಾರಿಯಾಗಿದ್ದಾರೆ.
ಕೇರಳದ ಗ್ಯಾಂಗ್ವೊಂದು ಪೂರ್ವನಿಯೋಜಿತ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ನವೆಂಬರ್ 20ರ ರಾತ್ರಿ ದರೋಡೆ ನೆದಿದ್ದು, ಆಭರಣ ತಯಾರಕ ಕೇರಳದ ನಿವಾಸಿ ವಿನು, ಎರಡು ದಿನಗಳ ಬಳಿಕ ಗುಂಡ್ಲುಪೇಟೆ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಕಾರು ಚಾಲಕ ಸಮೀರ್ ಹಾಗೂ ವಿನು, ಮಂಡ್ಯದ ರಾಜೇಶ್ ಜ್ಯುವೆಲರ್ಸ್ ಎಂಬಾತನಿಂದ ಆಭರಣ ತಯಾರಿಕೆಗಾಗಿ 800 ಗ್ರಾಂ 24 ಕ್ಯಾರೆಟ್ ಚಿನ್ನದ ಗಟ್ಟಿ ಹಾಗೂ 518 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಖರೀದಿಸಿ ಬಂಡೀಪುರದ ಮೂಲೆಹೊಳೆ ಮೂಲಕ ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ ಎರಡು ಮೂರು ಕಾರುಗಳಲ್ಲಿ ಬಂದಿದ್ದ ದರೋಡೆಕೋರರು ಕಾರನ್ನು ಅಡ್ಡಗಟ್ಟಿ ಕಾರು ಸಮೇತ ಚಿನ್ನವನ್ನು ಅಪಹರಿಸಿದ್ದಾರೆ.
ಒಟ್ಟು 10-12 ಮಂದಿ ಸೇರಿ ಈ ಕೃತ್ಯವೆಸಗಿದ್ದಾರೆಂದು ವಿನು ತಿಳಿಸಿದ್ದಾರೆ. ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಮೂಲೆಹೊಳೆ ಚೆಕ್ ಪೋಸ್ಟ್ ಗೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗುಂಡ್ಲುಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆಭರಣ ತಯಾರಕ ವಿನು ಸಲ್ಲಿಸಿದ ಚಿನ್ನದ ಕೆಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಚಿನ್ನ ಪಡೆಯುವ ಹಾಗೂ ಚಿನ್ನ ಸಾಗಾಟದ ಎಲ್ಲಾ ಮಾರ್ಗದ ಮಾಹಿತಿಯನ್ನು ಖಚಿತವಾಗಿ ತಿಳಿದುಕೊಂಡೇ ದರೋಡೆಕೋರರು ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಕೇರಳದ ದರೋಡೆ ಗ್ಯಾಂಗ್ ಕೃತ್ಯ ಎಸಗಿರುವ ಬಗ್ವುಗೆಯೂ ಅನುಮಾನ ವ್ಯಕ್ತವಾಗಿದೆ, ತನಿಖೆ ತೀವ್ರಗೊಳಿಸಲಾಗಿದೆ ಎಂದು ಎಸ್ಪಿ ಡಾ.ಬಿ.ಟಿ.ಕವಿತಾ ತಿಳಿಸಿದ್ದಾರೆ.


