ಬೆಂಗಳೂರು: ಪೊಲೀಸ್ ಮಾಹಿತಿದಾರರ ಸೋಗಿನಲ್ಲಿ ಮಹಿಳೆಯ ಮನೆಗೆ ನುಗ್ಗಿ ದರೋಡೆ ಮಾಡಿದ ಬಳಿಕ ಆಕೆಯ ಮೇಲೆ ಸಾಮೂಹಿಕ ಆತ್ಯಾಚಾರ ಎಸಗಿದ ಐವರಲ್ಲಿ ಮೂವರನ್ನು ಬಂಧಿಸಿರುವ ಮಾದನಾಯ್ಕನಹಳ್ಳಿ ಪೊಲೀಸರು ಇನ್ನಿಬ್ಬರು ಬಂಧನಕ್ಕೆ ತೀವ್ರ ಶೋಧ ಕೈಗೊಂಡಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ 28 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಗಂಗೊಂಡನಹಳ್ಳಿಯ ಸುತ್ತಮುತ್ತಲಿನ ನಿವಾಸಿಗಳಾದ ಕಾರು ಚಾಲಕರಾಗಿದ್ದ ಕಾರ್ತಿಕ್, ಗೆಲಿನ್ ಹಾಗೂ ನವೀನ್ ನನ್ನು ಬಂಧಿಸಿ ಕೃತ್ಯದಲ್ಲಿ ಶಾಮೀಲಾಗಿರುವ ಮತ್ತಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.
ಮಾದನಾಯ್ಕನಹಳ್ಳಿಯ ಗಂಗೊಂಡನಹಳ್ಳಿಯ ಮಾರೇಗೌಡರ ಮನೆಯಲ್ಲಿ ನೇಪಾಳಿ ಮೂಲದ ಸಂತ್ರಸ್ತೆ ಮತ್ತು ಅವರ ಕುಟುಂಬ ಬಾಡಿಗೆಗೆ ವಾಸವಿದ್ದರು.ಕಳೆದ ಅ.20ರ ಮಧ್ಯರಾತ್ರಿ ಸಂತ್ರಸ್ತೆ ವಾಸವಿದ್ದ ಮನೆಗೆ ನುಗ್ಗಿದ ಐವರು ಆರೋಪಿಗಳ ಗ್ಯಾಂಗ್, ತಾವು ‘ಪೀಣ್ಯ ಪೊಲೀಸರ ಇನ್ ಫಾರ್ಮಸ್ ‘ (ಮಾಹಿತಿದಾರರು) ಎಂದು ಹೇಳಿಕೊಂಡಿದ್ದಾರೆ.
“ನಿಮ್ಮ ಮನೆಯಲ್ಲಿ ಗಾಂಜಾ ಮತ್ತು ವೇಶ್ಯವಾಟಿಕೆ ನಡೆಸುತ್ತಿದ್ದೀರಾ” ಎಂದು ಆರೋಪಿಸಿದ್ದಾರೆ. ನಂತರ ಮಾರಕಾಸ್ತ್ರಗಳನ್ನು ತೋರಿಸಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತೆಯ 14 ವರ್ಷದ ಮಗ ಹಾಗೂ ಅವರ ಸ್ನೇಹಿತೆಯ ಮೇಲೂ ಹಲ್ಲೆ ಮಾಡಲಾಗಿದೆ.
ಮನೆಯಲ್ಲಿದ್ದ ಗಂಡಸರನ್ನು ಕಟ್ಟಿ ಹಾಕಿ ಥಳಿಸಿದ್ದಾರೆ.ಬಳಿಕ ದುಷ್ಕರ್ಮಿಗಳು ಮಹಿಳೆಯನ್ನು ಪಕ್ಕದ ಮನೆಗೆ ಎಳೆದೊಯ್ದು, ಐವರಲ್ಲಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಭೀಕರ ಕೃತ್ಯದ ನಂತರ, ಆರೋಪಿಗಳು ಮನೆಯಲ್ಲಿದ್ದ ಹಣ ಮತ್ತು ಮೊಬೈಲ್ ಫೋನ್‌ಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಿದರು.
ನಂತರ ಸಂತ್ರಸ್ತೆಯ 14 ವರ್ಷದ ಮಗ ಧೈರ್ಯ ಮಾಡಿ ಪೊಲೀಸ್ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ಆರೋಪಿಗಳು ಪರಾರಿಯಾಗಿದ್ದರು.
ವಿಚಾರ ತಿಳಿದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಗ್ಯಾಂಗ್ ರೇಪ್ ಮತ್ತು ಡಕಾಯಿತಿ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಹಲ್ಲೆಗೊಳಗಾದ ಗಂಡಸರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಕರಣದ ತನಿಖೆಗಾಗಿ ನೆಲಮಂಗಲ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆ ಚುರುಕುಗೊಳಿಸಿದ ಪೊಲೀಸರು, ಕೃತ್ಯ ಎಸಗಿದ ಕಾರ್ತಿಕ್, ಗ್ರೇನ್ ಮತ್ತು ಸುಯೋಗ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಸಂತ್ರಸ್ತೆಯ ಮನೆಯಲ್ಲಿದ್ದ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಲಾಗಿದ್ದು,ಅವರು ಚೇತರಿಸಿಕೊಂಡಿದ್ದಾರೆ,ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಸಂತ್ರಸ್ತೆ ವಾಸವಿದ್ದ ಮನೆಯಿಂದ ಸ್ವಲ್ಪ ದೂರದಲ್ಲಿ ವಾಸವಾಗಿದ್ದು,ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ಹೇಳಿದರು.