ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿದ್ದಾನೆಂದು ಯುವತಿ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಮೊಹಮ್ಮದ್ ಇಶಾಕ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಶಾಕ್ ಯುವತಿಗೆ ಮೋಸ ಮಾಡಿ ಮತ್ತೊಬ್ಬಳು ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಮತಾಂತರ ಆಗಲು ಒಪ್ಪದೆ ಇದ್ದ ಕಾರಣಕ್ಕೆ ಮೋಸ ಮಾಡಿದ್ದಾನೆಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
2024 ರ ಅಕ್ಟೋಬರ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಇವರಿಬ್ಬರು ಪರಿಚಯಗೊಂಡು ಸ್ನೇಹ, ಪ್ರೀತಿಯಾಗಿದೆ. ಬಳಿಕ ಮದುವೆಯಾಗುವುದಾಗಿ ನಂಬಿಸಿ ಒಪ್ಪಿತ ದೈಹಿಕ ಸಂಪರ್ಕಮಾಡಿದ್ದರು. ಯುವತಿ ಮತಾಂತರ ಆಗಲು ಒಪ್ಪದ್ದಕ್ಕೆ ಆತ ಮೋಸ ಮಾಡಿದ್ದಾನೆಂದು ಯುವತಿ ಹೇಳಿದ್ದಾಳೆ. ಇಶಾಕ್ ಅಣ್ಣ ಹಾಗೂ ಭಾವ ಕೂಡಾ ಮತಾಂತರ ಆಗುವಂತೆ ಒತ್ತಡ ಹಾಕಿದ್ದರು. ಮದುವೆ ಆಗಬೇಕಿದ್ದರೆ ಮತಾಂತರ ಆಗಬೇಕು. 40 ದಿನಕಾಲಾವಕಾಶ ಇರುತ್ತದೆ. ನಮಾಜ್ ಮಾಡಲು ಕಲಿತುಕೊಳ್ಳಬೇಕು. ಆಮೇಲೆ ಮದುವೆ ಬಗ್ಗೆ ಮನೆಯಲ್ಲಿ ಮಾತನಾಡೋಣ ಎಂದು ಇಶಾಕ್ ಹೇಳಿದ್ದಾಗಿ ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.
ಮತಾಂರತಗೊಳ್ಳಲು ನಿರಾಕರಿಸಿದ್ದಕ್ಕೆ ಇಶಾಕ್ ಅವರದ್ದೇ ಸಮುದಾಯದ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಒಮ್ಮೆ ನಾನು ಆತ್ಮಹತ್ಯೆಗೆ ಯತ್ನಿಸಿದಾಗ ಇಶಾಕ್ ಕುಟುಂಬದವರು ನನಗೆ ಕರೆ ಮಾಡಿ ಕರೆಸಿಕೊಂಡಿದ್ದರು. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ, ಕೇಸ್ ಅಂತೆಲ್ಲಾ ಹೋಗಬೇಡ. ಅವನೊಂದಿಗೆ ಮಾತನಾಡಿ ಒಂದು ನಿರ್ಧಾರ ಮಾಡು. ಏನಾದರೂ ಇದ್ದರೂ ಮಾತನಾಡಿ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದರು. ನಾನು ಈ ವಿಷಯವನ್ನು ನನ್ನ ಕುಟುಂಬಸ್ಥರಿಗೆ ತಿಳಿಸಿರಲಿಲ್ಲ ಎಂದು ಯುವತಿ ಹೇಳಿದ್ದಾಳೆ.
ಯುವತಿ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ದೂರು ದಾಖಲಿಸಿದ್ದು, ಪ್ರಕರಣವನ್ನು ಅಮೃತಹಳ್ಳಿ ಠಾಣೆಗೆ ವರ್ಗಾಯಿಸಲಾಗಿದೆ. ತನಗೆ ನ್ಯಾಯ ಕೊಡಿಸುವಂತೆ ಯುವತಿ ಮನವಿ ಮಾಡಿಕೊಂಡಿದ್ದಾರೆ.