ಮೇಲ್ವರ್ಗದವರು ಕೆಳವರ್ಗದ ಸಮುದಾಯಗಳನ್ನು ಬಹಿಷ್ಕರಿಸುವುದು ಕೇಳಿದ್ದೀರಿ. ಆದರೆ ದಲಿತ ಸಮುದಾಯದಿಂದಲೇ ದಲಿತ ಕುಟುಂಬಗಳನ್ನು ಬಹಿಷ್ಕರಿಸಿದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.
ಅಂಬೇಡ್ಕರ್ ಕಾಲೋನಿಯ 7 ಕುಟುಂಬಗಳು ಬಹಿಷ್ಕಾರಕ್ಕೆ ಒಳಗಾಗಿದ್ದು, ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಕುಲದ ಮುಖಂಡರು ಆದೇಶ ಮಾಡಿದ್ದಾರೆ. ಇದೀಗ ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.
ಸಮುದಾಯದ ವಿರುದ್ಧ ಮಾತನಾಡಿದ್ದಕ್ಕೆ 7 ಕುಟುಂಬಗಳಿಗೆ ಬಹಿಷ್ಕಾರ ಕಾಲೋನಿಯ ದಲಿತ ಸಮುದಾಯದವರು ಹಬ್ಬವನ್ನು ಆಚರಿಸಲು ಕಾಲೋನಿಯಲ್ಲಿ ಹಣ ಕೇಳಲಾಗುತ್ತಿತ್ತು. ಈ ಸಂದರ್ಭದಲ್ಲಿ 7 ಕುಟುಂಬದ ಸದಸ್ಯರು ಕುಲದ ವಿರುದ್ಧ ಮಾತನಾಡಿದ್ದರು. ಅಷ್ಟೇ ಅಲ್ಲದೇ ಹಬ್ಬಕ್ಕೆ ಹಣ ನೀಡುವುದಿಲ್ಲವೆಂದೂ ಹೇಳಿದ್ದರು. ಇದೇ ಕಾರಣಕ್ಕೆ ದಲಿತ ಸಮುದಾಯ ಪಂಚಾಯಿತಿಯ ಯಜಮಾನರು ಈ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರವೊಡ್ಡಿದ್ದಾರೆ.
ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಆದೇಶ ಮಾಡಲಾಗಿದೆ. ಅವರನ್ನು ಕುಲದ ಯಾವುದೇ ಕಾರ್ಯಕ್ರಮಗಳಿಗೂ ಕರೆಯಬಾರದೆಂದೂ, ಕರೆದರೂ ಆ ಕುಟುಂಬಗಳು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದೂ ಕಟ್ಟಾಜ್ಞೆ ಮಾಡಿದ್ದಾರೆ. ಬಹಿಷ್ಕೃತ ಕುಟುಂಬಗಳೊಂದಿಗೆ ಯಾವುದೇ ವ್ಯಾಪಾರ, ವ್ಯವಹಾರ ನಡೆಸದಂತೆ ಸೂಚಿಸಲಾಗಿದೆ.
ತಮ್ಮದೇ ಸಮುದಾಯದವರಿಂದ ಸಾಮಾಜಿಕ ಬಹಿಷ್ಕಾರದ ಶಿಕ್ಷೆಗೆ ಗುರಿಯಾಗಿರುವ ಕುಟುಂಬಗಳೀಗ ಸಿಡಿದೆದ್ದಿವೆ. ಬಹಿಷ್ಕಾರ ಹಾಕಿದ ಕುಲದ ಮುಖಂಡರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲು ಆ 7 ಕುಟುಂಬಗಳು ಮುಂದಾಗಿವೆ.ಈ ಹಿನ್ನೆಲೆ ತಮಗಾದ ಅನ್ಯಾಯವನ್ನು ಅರಿತು, ತಮ್ಮ ನೆರವಿಗೆ ಬರುವಂತೆ ಸರ್ಕಾರ ಸೇರಿದಂತೆ ಡಿಸಿ, ಎಸ್ಪಿ ಹಾಗೂ ತಾಲೂಕು ಆಡಳಿತಕ್ಕೆ ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಮನವಿ ಮಾಡಿವೆ.