ವಿಜಯಪುರ ಮಿಂಚನಾಳ ತಾಂಡಾದ ಮಹದೇವ ನಗರದಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಶಿವಮ್ಮ ರಾಜು ರಾಠೋಡ್ (8), ಕಾರ್ತಿಕ ವಿಶ್ವ ರಾಠೋಡ್ (7) ಹಾಗೂ ಸ್ವಪ್ನಾ ರಾಜು ರಾಠೋಡ್ (12) ಮೃತ ಮಕ್ಕಳು. ಈ ದಾರುಣ ಘಟನೆಯಲ್ಲಿ ಕಂದಮ್ಮಗಳನ್ನು ಕಳೆದುಕೊಂಡಿರುವ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಹದೇವ ನಗರದ ಬಳಿಯ ರಾಠೋಡ್ ಎಂಬವರ ಜಮೀನಿನಲ್ಲಿ ಈ ಮಕ್ಕಳು ಕುರಿಗಳ ಜೊತೆಗೆ ಆಟವಾಡುತ್ತಿದ್ದರು. ಕುರಿಗಳ ಜೊತೆ ಆಡುತ್ತ ಕೃಷಿ ಹೊಂಡದ ಬಳಿ ತೆರಳಿರುವ ಮಕ್ಕಳು ಆಯತಪ್ಪಿ ಬಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಬಹಳ ಹೊತ್ತಾದರೂ ಮಕ್ಕಳು ಬಾರದಿರುವ ಹಿನ್ನಲೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಸಂಶಯ ಬಂದು ಕೃಷಿ ಹೊಂಡದಲ್ಲಿ ಹುಡುಕಾಡಿದಾಗ ಮಕ್ಕಳ ಶವ ಪತ್ತೆಯಾಗಿದೆ. ಸ್ಥಳಕ್ಕೆ ವಿಜಯಪುರ ತಹಶೀಲ್ದಾರ ಚೆನಗೊಂಡ ಹಾಗೂ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾನೂನಿನ ಪ್ರಕಾರ ಕೃಷಿಹೊಂಡದ ಸುತ್ತಲೂ ತಂತಿ ಬೇಲಿ ಹಾಕುವುದು ಕಡ್ಡಾಯ, ಕೃಷಿ ಹೊಂಡದ ಬಳಿ ಯಾರೂ ಓಡಾಡದಂತೆ ನೋಡಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಕೆಲವರು ಈ ನಿಯಮಗಳನ್ನು ಪಾಲನೆ ಮಾಡದಿರುವುದರಿಂದ ಆಗಾಗ ಕೃಷಿ ಹೊಂಡಕ್ಕೆ ಬಿದ್ದು ಮಕ್ಕಳ ಸಾವು ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕೃಷಿ ಹೊಂಡಗಳನ್ನು ಹೊಂದಿರುವ ರೈತರು ಎಚ್ಚೆತ್ತುಕೊಂಡು ಹೊಂಡದ ಸುತ್ತ ಬೇಲಿ ಕಡ್ಡಾಯವಾಗಿ ನಿರ್ಮಿಸುವ ಮೂಲಕ ಇಂಥ ದುರಂತಗಳನ್ನು ತಪ್ಪಿಸಬಹುದು.