ಪ್ರತ್ಯೇಕವಾಗಿ ಸೆರೆ ಹಿಡಿಯಲಾಗಿದ್ದ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ಪುನರ್ಮಿಲನಕ್ಕೆ ಮೈಸೂರು ಮೃಗಾಲಯದ ಪುನರ್ವಸತಿ ಕೇಂದ್ರ ಸಾಕ್ಷಿಯಾಯಿತು.
ಆಹಾರ ಅರಸಿ ತನ್ನ ನಾಲ್ಕು ಮರಿಗಳೊಂದಿಗೆ ಕಾಡಿನಿಂದ ನಾಡಿಗೆ ಬಂದ ಹೆಣ್ಣು ಹುಲಿ, ನವೆಂಬರ್ 27 ರಂದು ನಾಗರಹೊಳೆಯ ಕಾಡಂಚಿನ ಗ್ರಾಮ ಗೌಡನಕಟ್ಟೆ ಬಳಿ ಮುಸುಕಿನ ಜೋಳದ ಹೊಲದಲ್ಲಿ ಕೆಲಸ ಮಾಡುತಿದ್ದ ರೈತ ಪ್ರಕಾಶ್ ಎಂಬುವವರ ಮೇಲೆ ದಾಳಿಗೆ ಮುಂದಾಗಿತ್ತು, ಅದೃಷ್ಟವಶಾತ್ ಹುಲಿ ದಾಳಿಯಿಂದ ಪಾರಾಗಿದ್ದ ಪ್ರಕಾಶ್, ತಕ್ಷಣ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಹುಲಿ ತನ್ನ ನಾಲ್ಕು ಮರಿಗಳೊಂದಿಗೆ ಇರುವುದು ಖಚಿತವಾಗಿತ್ತು. ತಕ್ಷಣ ಅದೇ ದಿನ ರಾತ್ರಿ ಥರ್ಮಲ್ ಡ್ರೋನ್ ಹಾಗೂ ನಾಲ್ಕು ಸಾಕಾನೆಗಳ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಾಯಿ ಹುಲಿಯನ್ನ ಸೆರೆ ಹಿಡಿದು, ಮೈಸೂರು ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ರವಾನಿಸಿದ್ದರು.
ಆ ನಂತರ ನಾಲ್ಕು ಹುಲಿ ಮರಿಗಳು ಬೇರೆ ಬೇರೆ ಕಡೆ ಚದುರಿ ಹೋಗಿದ್ದವು. ಹೀಗಾಗಿ ನೂರಾರು ಅರಣ್ಯ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಥರ್ಮಲ್ ಡ್ರೋನ್ ಹಾಗೂ ತಾಯಿ ಹುಲಿ ಸೆರೆ ಹಿಡಿದ ಸ್ಥಳದಲ್ಲಿ ಅದರ ಗರ್ಜನೆ ಶಬ್ದವನ್ನು ಕೇಳಿಸುವಂತೆ ಸ್ಪೀಕರ್ ಅಳವಡಿಸಿ ಭಾನುವಾರ ನಾಲ್ಕು ಮರಿಗಳನ್ನು ಅರಣ್ಯ ಇಲಾಖೆ ಸುರಕ್ಷಿತವಾಗಿ ಸೆರೆ ಹಿಡಿದು, ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು.
ಪುನರ್ವಸತಿ ಕೇಂದ್ರದಲ್ಲಿ ಹುಲಿ ಮರಿಗಳಿಗೆ ಆರೈಕೆ ಮಾಡಿ ಬಳಿಕ ಸೋಮವಾರ ರಾತ್ರಿ ತಾಯಿಯ ಮಡಿಲಿಗೆ ಸೇರಿಸಲಾಗಿತ್ತು. ಮೃಗಾಲಯದ ಅಧಿಕಾರಿಗಳು ಸಿಸಿಟಿವಿ ಪರಿಶೀಲಿಸಿದಾಗ ತಾಯಿಯೊಂದಿಗೆ ಮರಿಗಳು ಹೊಂದಿಕೊಂಡಿದ್ದು, ತಾಯಿ ಹಾಲನ್ನು ಕುಡಿಯುತ್ತಿವೆ. ವೈದ್ಯಕೀಯ ವರದಿಯ ಅನುಸಾರ ತಾಯಿ ಮತ್ತು ಮರಿಗಳನ್ನ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗುವುದು ಎಂದು ಡಿಸಿಎಫ್ ಪರಮೇಶ್ವರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.


