ನವದೆಹಲಿ: ಭಾರತೀಯ ನೌಕಾಪಡೆಗೆ ಫ್ರಾನ್ಸ್ ನಿರ್ಮಿತ 26 ರಫೇಲ್ ಜೆಟ್ ಯುದ್ಧ ವಿಮಾನಗಳನ್ನು ಪಡೆಯಲು ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ಮಧ್ಯೆ ಒಪ್ಪಂದ ಆಗಿದೆ.
ಆನ್ಲೈನ್ನಲ್ಲಿ ಈ 64 ಸಾವಿರ ಕೋಟಿ ರೂ ಮೌಲ್ಯದ ಒಪ್ಪಂದಕ್ಕೆ ಸರ್ಕಾರಗಳು ಅಂಕಿತ ಹಾಕಿದವು. ಭಾರತದ ವತಿಯಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು. ಏಪ್ರಿಲ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಭದ್ರತಾ ಸಮಿತಿ (ಸಿಸಿಎಸ್) ಈ ಒಪ್ಪಂದಕ್ಕೆ ಹಸಿರು ನಿಶಾನೆ ಕೊಟ್ಟಿತ್ತು.
ಭಾರತದ ನೌಕಾಪಡೆಗೆ ಅಗತ್ಯ ಇರುವ ಫೈಟರ್ ಜೆಟ್ಗಳಿಗೆ ರಫೇಲ್ ಅಲ್ಲದೆ ಬೇರೆ ಬೇರೆ ಆಯ್ಕೆಗಳನ್ನು ಅವಲೋಕಿಸಲಾಗಿತ್ತು. ಅಮೆರಿಕದ ಬೋಯಿಂಗ್ ಸಂಸ್ಥೆಯ ಎಫ್/ಎ18 ಸೂಪರ್ ಹಾರ್ನೆಟ್ ಯುದ್ಧವಿಮಾನವೂ ಬಿಡ್ನಲ್ಲಿತ್ತು. ಆದರೆ, ಭಾರತದ ನೌಕಾಪಡೆಗೆ ರಫೇಲ್ ವಿಮಾನ ಹೆಚ್ಚು ಸೂಕ್ತವೆಂದು ಕಂಡು ಬಂದಿದ್ದರಿಂದ ಅಂತಿಮವಾಗಿ ಅದನ್ನು ಆಯ್ಕೆ ಮಾಡಲಾಗಿದೆ.
ಭಾರತದ ವಾಯುಪಡೆ ಈಗಾಗಲೇ 36 ರಫೇಲ್ ಫೈಟರ್ ಜೆಟ್ಗಳನ್ನು ಹೊಂದಿದೆ. ಈಗ ನೌಕಾಪಡೆಯೂ ಕೂಡ ಇದೇ ಜೆಟ್ಗಳನ್ನು ಪಡೆಯಲಿರುವುದರಿಂದ ಒಂದು ರೀತಿಯಲ್ಲಿ ಅನುಕೂಲಕ ಸ್ಥಿತಿ ಸಿಕ್ಕಂತಾಗುತ್ತದೆ.
ರಫೇಲ್ ಜೆಟ್ಗಳು ಸದ್ಯ ವಿಶ್ವದ ಅತ್ಯಂತ ಪ್ರಬಲ ಫೈಟರ್ ಜೆಟ್ಗಲ್ಲೊಂದೆಂದು ಪರಿಗಣಿಸಲಾಗಿದೆ. ದೂರ ಶ್ರೇಣಿಯ ಕ್ಷಿಪಣಿ, ಆ್ಯಂಟಿ ಶಿಪ್ ಅಸ್ತ್ರ, ಎಲೆಕ್ಟ್ರಾನಿಕ್ ಸಮರ ಇತ್ಯಾದಿ ಹೊಸ ಶಸ್ತ್ರಾಸ್ತ್ರಗಳು ಈ ಫೈಟರ್ ಜೆಟ್ನಲ್ಲಿ ಇರಲಿವೆ.
ಫ್ರಾನ್ಸ್ ದೇಶದ ಡಸ್ಸೋ, ಥೇಲ್ಸ್, ಎಂಬಿಡಿಎ ಸಂಸ್ಥೆಗಳು ರಫೇಲ್ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ತೊಡಗಲಿವೆ. ಭಾರತದಲ್ಲಿ ಇವುಗಳ ತಯಾರಿಕೆ ಅಗುವುದಿಲ್ಲ. ಎಲ್ಲವೂ ಫ್ರಾನ್ಸ್ನಲ್ಲೇ ಅಸೆಂಬಲ್ ಆಗುತ್ತವೆ. ಆದರೆ, ಈ ವಿಮಾನ ತಯಾರಿಕೆಯಲ್ಲಿರುವ ಫ್ರಾನ್ಸ್ ಕಂಪನಿಗಳು ತಮಗೆ ಅಗತ್ಯವಿರುವ ವಿವಿಧ ಬಿಡಿಭಾಗಗಳಿಗೆ ಭಾರತೀಯ ಕಂಪನಿಗಳಿಗೆ ಆರ್ಡರ್ ಕೊಡಬಹುದು. ಇದರಿಂದ ರಫೇಲ್ ಜೆಟ್ ನಿರ್ಮಾಣದಲ್ಲಿ ಭಾರತದ ಪರೋಕ್ಷ ಪಾತ್ರ ಇರುತ್ತದೆ.