ರಸ್ತೆಗಳಲ್ಲಿ ಹೆಚ್ಚುತ್ತಿರುವ ಗುಂಡಿಗಳನ್ನು ಕೂಡಲೇ ದುರಸ್ತಿಗೊಳಿಸಿ ಸಂಚಾರ ಯೋಗ್ಯವಾಗಿಸುವಂತೆ ಸೂಚನೆ ನೀಡಲಾಗಿದ್ದು, ಇದಕ್ಕಾಗಿ ಒಂದು ತಿಂಗಳ ಗಡುವು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಧಿಕಾರಿಗಳೇನು ರಸ್ತೆಯಲ್ಲಿ ಕಣ್ಣು ಮುಚ್ಚಿಕೊಂಡು ಓಡಾಡ್ತೀರಾ? ರಸ್ತೆಗೆ ತ್ಯಾಜ್ಯ ಸುರಿದಿರುವುದನ್ನು ಗಮನಿಸೋಕೆ ಆಗೋದಿಲ್ಲವಾ ಎಂದು ಬಿಬಿಎಂಪಿ, ಬಿಡಿಎ ಮತ್ತು ಟ್ರಾಫಿಕ್ ಪೊಲೀಸರಿಗೆ ತಮ್ಮ ಬೆಂಗಳೂರು ನಗರ ಪ್ರದಕ್ಷಿಣೆಯ ಸಮಯದಲ್ಲಿ ತರಾಟೆಗೆ ತೆಗೆದುಕೊಂಡರು.
ಪಣತ್ತೂರಿನ ರಸ್ತೆಯುದ್ದಕ್ಕೂ ಕಟ್ಟಡ ನಿರ್ಮಾಣದ ತ್ಯಾಜ್ಯ ಸುರಿಯುತ್ತಿರುವುದನ್ನು ಗಮನಿಸಿದ ಸಿಎಂ, ಅಲ್ಲೇ ಸಿಸಿ ಟಿವಿ ಅಳವಡಿಕೆ ಮಾಡಿಸಿ, ಬಿಬಿಎಂಪಿ ಮಾರ್ಷಲ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರಿಗೆ ನಿರ್ದೇಶನ ನೀಡಿದರು.
ವೈಟ್ ಟಾಪಿಂಗ್ ಕಾಮಗಾರಿಯಡಿ ಅಭಿವೃದ್ಧಿಪಡಿಸಿದ ರಸ್ತೆಗಳಲ್ಲಿ ಗುಂಡಿಗಳು ಬಿದ್ದರೆ ಅದರ ಹೊಣೆ ಗುತ್ತಿಗೆದಾರರ ಮೇಲಾಗಿರುತ್ತದೆ. ಒಮ್ಮೆ ರಸ್ತೆಗಳನ್ನು ವೈಟ್ ಟಾಪಿಂಗ್ ಮೂಲಕ ಒಪ್ಪಿಸಿಕೊಂಡ ಬಳಿಕ ನಿರ್ವಹಣೆಗೆ ಬಿಬಿಎಂಪಿಯಿಂದ ಹಣ ಸಿಗುವುದಿಲ್ಲ. 2-3 ವರ್ಷಗಳ ಕಾಲ ಕಾಮಗಾರಿ ನಡೆಯುವ ಈ ಅವಧಿಯಲ್ಲಿ ಗುತ್ತಿಗೆದಾರರೇ ರಸ್ತೆಗಳ ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಬಾಗಲೂರು ರಸ್ತೆಯಲ್ಲಿ ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ, ಸಂಬಂಧಿತ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದರು.
ನಗರ ಪ್ರದಕ್ಷಿಣೆಯ ಅಂಗವಾಗಿ ಸಿಎಂ ವಾರ್ಡ್ ನಂ. 23, ನಾಗವಾರದ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಆವರಣದೊಳಗೆ ಖಾಲಿ ಜಾಗವಿದ್ದರೂ, ಹೊರಭಾಗದಲ್ಲಿ ರಾಶಿ ರಾಶಿಯಾಗಿ ಕಸ ಬಿದ್ದಿರುವುದನ್ನು ಗಮನಿಸಿ, ಬಿ ಸ್ಮೈಲ್ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ಅಲ್ಲದೆ, ಸಮೀಪದ ರಸ್ತೆಯಲ್ಲಿ ಜೆಲ್ಲಿ ಕಲ್ಲು ಬಿದ್ದಿರುವುದನ್ನು ಕಂಡು, ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಅವರ ವಿರುದ್ಧವೂ ನೋಟಿಸ್ ಜಾರಿಗೊಳಿಸುವಂತೆ ಹೇಳಿದರು.
ಹೆಬ್ಬಾಳದ ಮೆಟ್ರೋ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಿಎಂ, ಬಿಎಂಆರ್‌ಸಿಎಲ್ ಸರ್ವಿಸ್ ರಸ್ತೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವುದು, ಚರಂಡಿ ಮುಚ್ಚಿರುವುದು, ನೀರು ನಿಲ್ಲುವ ವ್ಯವಸ್ಥೆ ಮಾಡಿರುವುದು ಹಾಗೂ ವೈಟ್ ಟಾಪಿಂಗ್ ರಸ್ತೆ ಹಾಳು ಮಾಡಿರುವುದನ್ನು ತೀವ್ರವಾಗಿ ಗುರ್ತಿಸಿ, ತಕ್ಷಣವೇ ಸರ್ವಿಸ್ ರಸ್ತೆ ದುರಸ್ತಿ ಹಾಗೂ ಚರಂಡಿ ದುರಸ್ತಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.