ಪ್ರವಾಸಿ ತಾಣವಾಗಿರುವ ಊಟಿಯಲ್ಲಿ ತಾಪಮಾನ ಶೂನ್ಯಕ್ಕೆ ತಲುಪಿದೆ. ಎವಲಾಂಚ್ ಪ್ರದೇಶದಲ್ಲಿ ತಾಪಮಾನ -2 ಡಿಗ್ರಿಗೆ ಕುಸಿದಿದೆ. ಊಟಿ, ಕಂಥಲ್, ಥಲೈಕುಂಥ ಪ್ರದೇಶಗಳಲ್ಲಿನ ಜಲಮೂಲಗಳು ಹೆಪ್ಪುಗಟ್ಟಿವೆ. ಇದರಿಂದ ಜನರು ಪರದಾಡುವಂತಾಗಿದೆ.
ವಿಪರೀತ ಚಳಿಯಿಂದಾಗಿ ಟೀ ತೋಟಗಳಿಗೆ ಹಾನಿಯಾಗುತ್ತಿದ್ದು, ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಚಳಿಯು ಇನ್ನೂ ಕೆಲವು ದಿನ ಹೀಗೆಯೇ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲೂ ಚಳಿ ತೀವ್ರಗೊಂಡಿದ್ದು, ಉತ್ತರ ಕರ್ನಾಟಕ ಪ್ರದೇಶಗಳು ತತ್ತರಿಸಿವೆ. ಮುಂದಿನ 2 ದಿನಗಳಲ್ಲಿ ಬೀದರ್, ವಿಜಯಪುರ, ಧಾರವಾಡ, ಹಾವೇರಿ, ರಾಯಚೂರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಪ್ರಮಾಣದಲ್ಲಿ ಮತ್ತಷ್ಟು ಇಳಿಕೆಯಾಗಲಿದ್ದು, ಚಳಿ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಭಾರತವೂ ಚಳಿಗೆ ಥರಗುಟ್ಟುತ್ತಿದೆ. ಕಾಶ್ಮೀರದಲ್ಲಿ ಮೈನಸ್ 7.8, ರಾಜಸ್ಥಾನದಲ್ಲಿ 2.5, ಹರ್ಯಾಣದಲ್ಲಿ 5 ಡಿಗ್ರಿ, ದಿಲ್ಲಿಯಲ್ಲಿ 10.5 ಡಿಗ್ರ ಉಷ್ಣಾಂಶ ದಾಖಲಾಗಿದೆ.