ಬೆಂಗಳೂರು:ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷದಿಂದ 5 ಲಕ್ಷದವರೆಗೆ ಸಾಲ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದು ಎಂದು ಸಹಕಾರ ಕೆ.ಎನ್.ರಾಜಣ್ಣ ವಿಧಾನಪರಿಷತ್‌ನಲ್ಲಿ ಮಂಗಳವಾರ ತಿಳಿಸಿದ್ದಾರೆ.
ಪ್ರಶೋತ್ತರ ಅವಧಿಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭೆ ಚುನಾವಣೆಗೂ ಮುನ್ನ ನಾವು ರಾಜ್ಯದ ಜನತೆಗೆ 3ರಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಭರವಸೆ ಕೊಟ್ಟಿದ್ದೆವು. ಅದರಂತೆ ನಮಗೆ ಜನ ಆಶೀರ್ವಾದ ಮಾಡಿದ್ದಾರೆ. ನುಡಿದಂತೆ ನಡೆದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ಕೊಟ್ಟರು.
ಪ್ರತಿಯೊಬ್ಬ ರೈತರಿಗೆ 3ರಿಂದ 5 ಲಕ್ಷದವರೆಗೆ ಸಾಲ ನೀಡಲು ಸಾಧ್ಯವಾಗುವುದಿಲ್ಲ. ಜಮೀನು ಲಭ್ಯತೆ, ಸಾಲ ಮರು ಪಾವತಿಸುವ ರೈತರ ಸಾಮರ್ಥ್ಯ ಇವೆಲ್ಲವನ್ನೂ ನೋಡಿ ಸಾಲದ ಪ್ರಮಾಣವನ್ನು ನಿಗದಿಪಡಿಸಲಾಗುತ್ತದೆ. ಆದರೂ ನಾವು ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ರೈತರಿಗೆ 10 ಲಕ್ಷದವರೆಗೂ ಸಾಲ ನೀಡುವ ಗುರಿ ಹೊಂದಲಾಗಿದೆ. ನಮಗೆ ನಬಾರ್ಡ್ ನಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಾಲಸೌಲಭ್ಯ ಸಿಗುತ್ತಿಲ್ಲ. ಪ್ರಸಕ್ತ ವರ್ಷ 936 ಕೋಟಿ ಸಾಲದ ಪ್ರಮಾಣವನ್ನು ಕಡಿತ ಮಾಡಲಾಗಿದೆ. ನಮಗೆ ಹೆಚ್ಚಿನ ಸಾಲವನ್ನು ನೀಡುವಂತೆ ಪ್ರಧಾನಿ, ಹಣಕಾಸು ಸಚಿವರು, ನಬಾರ್ಡ್ ಮುಖ್ಯಸ್ಥರಿಗೂ ಮನವಿ ಮಾಡಲಾಗಿದೆ ಎಂದರು.
ಕಳೆದ ವರ್ಷ ನಾವು ರೈತರಿಗೆ 5600 ಕೋಟಿ ಸಾಲವನ್ನು ನೀಡಿದ್ದೇವೆ. ನಬಾರ್ಡ್‌ನವರು ಸಾಲದ ಪ್ರಮಾಣವನ್ನು ಕಡಿತ ಮಾಡಿದ್ದರಿಂದ ನಮ್ಮ ಗುರಿ ತಲುಪಲು ಸಾಧ್ಯವಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದವರು ನಬಾರ್ಡ್‌ಗೆ ಸಾಲ ನೀಡುತ್ತಾರೆ. ಅವರು ಅಪೆಕ್ಸ್ ಬ್ಯಾಂಕ್‌ಗೆ ನೀಡುತ್ತಾರೆ. ಅಪೆಕ್ಸ್ ಬ್ಯಾಂಕ್ ನವರು ವಿವಿಧ ಸಂಘಸಂಸ್ಥೆಗಳಿಗೆ ನೀಡುತ್ತಾರೆ ಎಂದು ವಿವರಿಸಿದರು.
ರೈತರಿಗೆ ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿ ಸೌಲವನ್ನು ನೀಡಲಾಗುತ್ತದೆ. ಅವರ ಯಾವ ಬೆಳೆಗಳಿಗೆ ಎಷ್ಟು ಪ್ರಮಾಣದ ಸಾಲ ನೀಡಬೇಕು ಎಂಬುದನ್ನು ಅಧಿಕಾರಿಗಳು ತೀರ್ಮಾನಿಸುತ್ತಾರೆ. ಬೆಳೆಗಳ ಸಾಮರ್ಥ್ಯ ಅನುಗುಣವಾಗಿ ನಾವು ಸಾಲ ವಿತರಿಸುತ್ತೇವೆ. ಅಪೆಕ್ಸ್ ಬ್ಯಾಂಕ್ ನೇರವಾಗಿ ಎಲ್ಲಿಯೂ ಸಾಲ ನೀಡುವುದಿಲ್ಲ. ಸಹಕಾರ ಸಂಸ್ಥೆಗಳ ಡೆಪಾಸಿಟ್ ಆಧಾರದ ಮೇಲೆ ಸಾಲ ವಿತರಣೆಯಾಗುತ್ತದೆ ಎಂದು ಹೇಳಿದರು.
ದುರಂತವೆಂದರೆ ನಮ್ಮ ರೈತರು ತಮ್ಮ ಸಾಲವನ್ನು ವಾಣಿಜ್ಯ ಬ್ಯಾಂಕ್‌ಗಳು ಇಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡುತ್ತಾರೆ. ಸಾಲ ಬೇಕೆಂದಾಗ ಸಹಕಾರಸಂಘಗಳಿಗೆ ಬರುತ್ತಾರೆ. ನಾವು ಸಂಪನ್ಮೂಲಗಳ ಲಭ್ಯತೆ ನೋಡಿಕೊಂಡು ಸಾಲ ವಿತರಣೆ ಮಾಡುತ್ತೇವೆ. ಸಹಕಾರ ಸಂಘಗಳು ಇರುವುದೇ ರೈತರ ಹಿತ ಕಾಪಾಡಲು. ನಮ್ಮ ಸರ್ಕಾರ ರೈತರಿಗೆ ಉತ್ತಮವಾದ ಸಾಲಸೌಲಭ್ಯ ಒದಗಿಸಲು ಬದ್ಧವಾಗಿದೆ ಎಂದು ರಾಜಣ್ಣ ಹೇಳಿದರು.