ಬೆಂಗಳೂರು: ಕರ್ನಾಟಕದ ಎಲ್ಲರ ಅಚ್ಚುಮೆಚ್ಚಿನ ವಾಹಿನಿ ಜೀ಼ ಕನ್ನಡ ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಹೃದಯಕ್ಕೆ ನಿರಂತರವಾಗಿ ಲಗ್ಗೆ ಇಡುತ್ತಾ ಬಂದಿದೆ. ಇದಕ್ಕೂ ಮೊದಲು ಉಘೆ ಉಘೆ ಮಾದೇಶ್ವರ ಮತ್ತು ವಿಷ್ಣು ದಶಾವತಾರ ಎಂಬ ಭಕ್ತಿಪ್ರಧಾನ ಧಾರಾವಾಹಿಗಳನ್ನು ನೀಡಿ ಕನ್ನಡಿಗರ ಮನಗೆದ್ದ ಜೀ಼ ಕನ್ನಡ ಈಗ ಮತ್ತೊಂದು ಭಕ್ತಿಪ್ರಧಾನ ಧಾರಾವಾಹಿಯನ್ನು ಜನರ ಮುಂದಿಡಲು ಸಜ್ಜಾಗಿದೆ.
‘ಶ್ರೀ ರಾಘವೇಂದ್ರ ಮಹಾತ್ಮೆ’ ಎಂಬ ಧಾರಾವಾಹಿ ಇದೇ ಸೆಪ್ಟೆಂಬರ್ 1 ರಿಂದ ರಾತ್ರಿ 9 ಗಂಟೆಗೆ ಜೀ಼ ಕನ್ನಡದಲ್ಲಿ ಪ್ರಸಾರ ಆಗಲಿದೆ ಮತ್ತು ಇದರಲ್ಲಿ ರಾಯರ ಬಾಲ್ಯ, ಪವಾಡಗಳು ಮತ್ತು ಅವರ ಜೀವನದಲ್ಲಿ ನಡೆದ ಅನೇಕ ಕಥೆಗಳು ನಮಗೆ ಕಾಣಸಿಗಲಿದೆ.
ಜೀ಼ ಕನ್ನಡವು ನಂಬಿಕೆ, ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ಬೇರು ಬಿಟ್ಟಿರುವ ಭವ್ಯವಾದ ಕಥೆಗಳನ್ನು ನಿರಂತರವಾಗಿ ಪ್ರೇಕ್ಷಕರಿಗೆ ಕೊಡುವುದರ ಜೊತೆಗೆ ಅರ್ಥಪೂರ್ಣ ಮನರಂಜನೆಯನ್ನು ನೀಡುವ ತನ್ನ ಮುಖ್ಯದ್ಯೇಯಕ್ಕೆ ಬದ್ಧವಾಗಿದೆ. ಈ ಪರಂಪರೆಯನ್ನು ಇನ್ನಷ್ಟು ಬಲಪಡಿಸುತ್ತಾ, ಜೀ ಕನ್ನಡ ಈಗ ʼಶ್ರೀ ರಾಘವೇಂದ್ರ ಮಹಾತ್ಮೆʼ ಎಂಬ ಭಕ್ತಿಪರ ಧಾರಾವಾಹಿಯನ್ನು ಪ್ರೇಕ್ಷಕರಿಗೆ ನೀಡುತ್ತಿದೆ.
ಇದು ಶ್ರೀ ರಾಘವೇಂದ್ರ ಸ್ವಾಮಿಗಳ ಅಸಾಮಾನ್ಯ ಜೀವನಯಾತ್ರೆಯನ್ನು ವಿವರಿಸುತ್ತದೆ. ರಾಯರ ಬಾಲ್ಯದಿಂದ ಹಿಡಿದು ಅವರ ಆತ್ಮಜಾಗೃತಿ, ಉಪದೇಶಗಳು, ಪವಾಡಗಳು ಮತ್ತು ಪರಂಪರೆ ಈ ಧಾರಾವಾಹಿಯಲ್ಲಿ ಕಾಣಸಿಗಲಿದೆ. ಕಥಾಶೈಲಿ, ಮತ್ತು ಭವ್ಯ ದೃಶ್ಯಾವಳಿಗಳ ಸಮನ್ವಯದೊಂದಿಗೆ ಈ ಧಾರಾವಾಹಿ ರಾಯರ ಆತ್ಮಚರಿತ್ರೆ ಮಾತ್ರವಲ್ಲದೆ ಜೀವನದ ಮೌಲ್ಯಗಳನ್ನು ವೀಕ್ಷಕರಿಗೆ ತಿಳಿಸುವಲ್ಲಿ ಯಶಸ್ವಿಯಾಗಲಿದೆ.
ಧಾರಾವಾಹಿಯಲ್ಲಿ ಪ್ರತಿಭಾನ್ವಿತ ತಾರಾ ಬಳಗ ಇದ್ದು ಇದರ ನಿರ್ಮಾಣ ಮತ್ತ್ತು ಕ್ರಿಯೇಟಿವ್ ಹೆಡ್ ಆಗಿ ಮಹೇಶ್ ಸುಖಧರೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಟಾಲೆಂಟೆಡ್ ಆಕ್ಟರ್, ಡೈರೆಕ್ಟರ್ ನವೀನ್ ಕೃಷ್ಣ ಅವರು ಹೊತ್ತಿದ್ದಾರೆ. ಇನ್ನು ಈ ಧಾರಾವಾಹಿಗೆ ಮಣಿಕಾಂತ್ ಕದ್ರಿ ಅವರ ಅಮೋಘ ಸಂಗೀತ ಇರಲಿದ್ದು ವಿಷ್ಣು ಪಾತ್ರದಲ್ಲಿ ಅಮಿತ್ ಕಶ್ಯಪ್ ಅವರು ನಟಿಸಿದ್ದಾರೆ.
ಸಿರಿ ಪ್ರಹ್ಲಾದ್ ಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದು ವ್ಯಾಸರಾಯರ ಪಾತ್ರದಲ್ಲಿ ಪರೀಕ್ಷಿತ್ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಕಾಸ್ ವಸಿಷ್ಠ, ದೀಪಿಕಾ, ಕಾರ್ತಿಕ್ ಸಾಮಗ, ಧನ್ಯಶ್ರೀ ಪ್ರಭು, ವಿಕ್ರಂ ಸೂರಿ, ಡಾ.ಸಂಜಯ್, ಸ್ನೇಹಾ ಹೆಗ್ಡೆ, ಶ್ರೀನಿಧಿ, ಶ್ರೀಲತಾ, ಅನುರಾಗ್ ಸೇರಿ ಅನೇಕ ಪ್ರತಿಭಾನ್ವಿತ ಕಲಾವಿದರ ದಂಡು ಕಾಣಸಿಗಲಿದೆ.
ಹಿರಣ್ಯ ಕಶಿಪುವಾಗಿ ಚೆಲುವರಾಜು, ಕಯಾದು ಆಗಿ ಲೂಸಿಯಾ ಚೆಲುವೆ ಶ್ರುತಿ ಹರಿಹರನ್ ಈ ಧಾರಾವಾಹಿಯಲ್ಲಿ ನಟಿಸಿದಲ್ಲಿದ್ದಾರೆ. ಇನ್ನು ರಾಯರು ಯಾರು ಎಂಬುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ. ಒಟ್ಟಿನಲ್ಲಿ ಇದು ಪ್ರೇಕ್ಷಕರಿಗೆ ಮನರಂಜನೆಯ ಹಬ್ಬದವನ್ನು ಕೊಡುವುದಂತೂ ಗ್ಯಾರಂಟಿ.
ʼಶ್ರೀ ರಾಘವೇಂದ್ರ ಮಹಾತ್ಮೆʼ ಕೇವಲ ಪೌರಾಣಿಕ ಕಥೆಯಾಗಿರದೆ ಈಗಿನ ಜನಾಂಗಕ್ಕೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವತ್ತ ಪ್ರಯತ್ನ ಮಾಡಲಿದೆ. ಉನ್ನತ ಮಟ್ಟದ ಟೆಕ್ನಾಲಜಿ, ಭವ್ಯ ಸೆಟ್‌ಗಳು ಮತ್ತು ಗಟ್ಟಿಯಾದ ಕಥಾಹಂದರದೊಂದಿಗೆ ಈ ಧಾರಾವಾಹಿ ಕನ್ನಡ ಪೌರಾಣಿಕ ಕಥನಶೈಲಿಗೆ ಹೊಸ ಅರ್ಥ ನೀಡಲು ಸಜ್ಜಾಗಿದೆ.
ಇದೇ ಸೆಪ್ಟೆಂಬರ್ 1 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿರುವ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯನ್ನು ನೋಡಲು ಮರೆಯದಿರಿ.