Menu

ಯುವ ಕಾಂಗ್ರೆಸ್ ಸೇನಾನಿಗಳಿಂದ ಸಮಾಜವಾದ ಮತ್ತು ಜಾತ್ಯತೀತ ಮೌಲ್ಯದ ರಕ್ಷಣೆ: ಸಿಎಂ ಸಿದ್ದರಾಮಯ್ಯ

ಯುವ ಕಾಂಗ್ರೆಸ್ ಸೇನಾನಿಗಳು ನಮ್ಮ ಸಂವಿಧಾನದ “ಸಮಾಜವಾದ” ಮತ್ತು “ಜಾತ್ಯತೀತ” ಮೌಲ್ಯದ ರಕ್ಷಣೆಗೆ ನಿಲ್ಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಹಾಗೂ “ಯುವ ಶಕ್ರಿ ಪ್ರತಿಜ್ಞೆ 2025” ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿ ಮಾತನಾಡಿದರು.

ಸಂಘ ಪರಿವಾರ ನಮ್ಮ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದವನ್ನು ತೆಗೆದು ಹಾಕಲು ಷಡ್ಯಂತ್ರ ನಡೆಸುತ್ತಿದೆ. ಬಿಜೆಪಿ ತನ್ನ ಹುಟ್ಟಿನಿಂದಲೇ‌ ಸಾಮಾಜಿಕ ನ್ಯಾಯದ ವಿರೋಧಿ ಆಗಿರುವುದರಿಂದ ಹೀಗೆ ಮಾಡುತ್ತಿದೆ. ಈ ಷಡ್ಯಂತ್ರವನ್ನು ರಾಜ್ಯದ ಮತ್ತು ದೇಶದ ಯುವ ಜನತೆ ಸೋಲಿಸಲು ಕಟ್ಟಿಬದ್ದವಾಗಿ ನಿಂತು ಹೋರಾಟ ಮುನ್ನಡೆಸುತ್ತದೆ ಎನ್ನುವ ಭರವಸೆ ತಮಗಿದೆ ಎಂದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ಸೈದ್ಧಾಂತಿಕವಾಗಿ ಯಾವತ್ತೂ ರಾಜಿ ಮಾಡಿಕೊಳ್ಳಬಾರದು. ರಾಜಿ ಮಾಡಿಕೊಂಡವರು ರಾಜಕೀಯವಾಗಿ ಉಳಿಯುವುದಿಲ್ಲ, ಬೆಳೆಯುವುದಿಲ್ಲ ಎಂದು ಎಚ್ಚರಿಸಿದರು.  ಬಿಜೆಪಿ ಪಕ್ಷಕ್ಕೆ ಭಾರತೀಯ ಸಮಾಜಕ್ಕೆ ಪೂರಕವಾದ ಸಿದ್ಧಾಂತವೇ ಇಲ್ಲ. ಸಮಾಜವನ್ನು ವಿಭಜಿಸುವ ಸಿದ್ಧಾಂತ ಬಿಜೆಪಿಯದ್ದು. ಜೆಡಿಎಸ್ ರಾಜ್ಯದ ಕೆಲವೇ ಸ್ಥಳಗಳಲ್ಲಿ ಅಸ್ತಿತ್ವದಲ್ಲಿದೆ. ಈ ಪಕ್ಷಕ್ಕೂ ಸರಿಯಾದ ಸಿದ್ಧಾಂತ ಇಲ್ಲ ಎಂದು ಹೇಳಿದರು.

ಮಂಡಲ್ ಕಮಿಷನ್ ವರದಿಯನ್ನು ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕೊಟ್ಟಿದ್ದು ನಮ್ಮ ಕಾಂಗ್ರಡಸ್ ಸರ್ಕಾರ. ಮಂಡಲ್ ವರದಿಯನ್ನು ವಿರೋಧಿಸಿದ್ದು ಇದೇ ಕಮಂಡಲವಾದಿಗಳು ಮತ್ತು ಮನುವಾದಿಗಳು. ಇವರ ಈ ಜನವಿರೋಧಿ ಇತಿಹಾಸವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ನೆನಪಿಡಬೇಕು. ಮಹಿಳಾ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ರಾಜೀವ್ ಗಾಂಧಿ ಯವರು ಸಂವಿಧಾನಕ್ಕೆ ತಿದ್ದುಪಡಿ ತಂದು 35% ಮಹಿಳಾ ಮೀಸಲಾತಿ ತಂದರು. ಸೋನಿಯಾಗಾಂಧಿಯವರು ಈ ಮೀಸಲಾತಿಯನ್ನು 50% ಗೆ ಹೆಚ್ಚಿಸಲು ಹೋರಾಟ ಮಾಡಿದ್ದು ಸೋನಿಯಾಗಾಂಧಿ. ಇದನ್ನು ನೆನಪಿಡಬೇಕು ಎಂದು ಸಿಎಂ ತಿಳಿಸಿದರು.

ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ ಯುವ ಕಾಂಗ್ರೆಸ್ಸಿನ ಜಾತ್ಯತೀತ ಸೇನಾನಿಗಳು ಸೈದ್ಧಾಂತಿಕ ಹೋರಾಟ ಮುಂದುವರೆಸುತ್ತಾರೆ, ಸೈದ್ಧಾಂತಿಕವಾಗಿ ಯುವ ಸಂಘಟನೆಯನ್ನು ಬಲಗೊಳಿಸುತ್ತಾರೆ ಎನ್ನುವ ಭರವಸೆ ಇದೆ. ಕಾಂಗ್ರೆಸ್ ಭಾರತ ದೇಶವನ್ನು ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಕೊಡಿಸಿತು. ಆದರೆ ಸಂಘ ಪರಿವಾರದ ಬಿಜೆಪಿ ಬ್ರಿಟೀಷರ ಜೊತೆ ಶಾಮೀಲಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿತು‌ ಎನ್ನುವುದು ಇತಿಹಾಸ. RSS 1925 ರಲ್ಲೇ ಆರಂಭವಾದರೂ ಯಾವತ್ತೂ ಕೂಡ ಹೆಡಗೇವಾರ್ ಆಗಲಿ, ಗುರುಜಿ ಹೆಸರಿನವರಾಗಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗಲಿಲ್ಲ. ಇದನ್ನು ಯುವ‌ಮಿತ್ರರು ಅರ್ಥ ಮಾಡಿಕೊಳ್ಳಬೇಕು ಎಂದರು.

RSSನ‌ ಮುಖವಾಣಿ ರಾಜಕೀಯ ಪಕ್ಷ ಜನಸಂಘ ಆರಂಭವಾಯಿತು. ಬಳಿಕ ಬಿಜೆಪಿ ಆಯಿತು. ಇವರು ದೇಶಭಕ್ತಿ ಬಗ್ಗೆ ಭಯಾನಕವಾಗಿ ಮಾತನಾಡ್ತಾರೆ. ಆದರೆ ದೇಶದ ಸ್ವಾತಂತ್ರ್ಯ ಹೋರಾಟದಿಂದ ದೂರ ಉಳಿದಿದ್ದರು. ದೇಶದ ಪರವಾಗಿ ಇವರು ಬರಲೇ ಇಲ್ಲ. ಭಾರತೀಯ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಇವರು ಮಾಡುವುದೇ ಇಲ್ಲ. ಮೋದಿಯವರು ಬಾಯಲ್ಲಿ “ಸಬ್ ಕಾ ಸಾಥ್” ಅಂತ ಡೈಲಾಗ್ ಹೊಡಿತಾರೆ. ಆದರೆ, ಬಿಜೆಪಿಯಲ್ಲಿ 240 ಮಂದಿ MP ಗಳಲ್ಲಿ ಒಬ್ಬರೂ ಅಲ್ಪ ಸಂಖ್ಯಾತರಿಲ್ಲ. ಇವರು ಯಾವತ್ತೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸುವುದಿಲ್ಲ. ಇವರು ಕೊಟ್ಟ ಸಂವಿಧಾನವನ್ನು ಗೌರವಿಸುವುದಿಲ್ಲ ಎಂದರು.

ತನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು RSS ನ ಸಾವರ್ಕರ್ ಎಂದು ಸ್ವತಃ ಅಂಬೇಡ್ಕರ್ ಅವರೇ ಪತ್ರ ಬರೆದಿದ್ದಾರೆ. ಇದನ್ನು ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಸುವ ಕೆಲಸವನ್ನು ಯುವ ಕಾಂಗ್ರೆಸ್ ಸೇನಾನಿಗಳು ಮಾಡಬೇಕು. ಸಂವಿಧಾನದ ಆಶಯ ಮತ್ತು ಮೌಲ್ಯಗಳ ಬಗ್ಗೆ ಬದ್ಧತೆ ಇರುವ ಏಕೈಕ ಪಕ್ಷ ಕಾಂಗ್ರೆಸ್. ಯುವ ಕಾಂಗ್ರೆಸ್ ಚುನಾವಣೆ ಮುಗಿದ ಮೇಲೆ ಮುಗಿಯಿತು. ಗೆದ್ದವರು, ಸೋತವರೆಲ್ಲಾ ಒಟ್ಟಾಗಿ ಹೋಗಬೇಕು. ಗುಂಪುಗಾರಿಕೆ ಬೇಡ, ಒಬ್ಬ ನಾಯಕರ ಹಿಂದೆ ಹೋಗಬಾರದು. ಸಿದ್ಧಾಂತವೇ ನಾಯಕತ್ವ. ಸಿದ್ಧಾಂತದ ಜೊತೆಗೆ ನೀವೆಲ್ಲಾ ಇರಬೇಕು. ಬಾವಿಯಲ್ಲಿ ಕಸ ಸೇರಿದಂತೆ ಜಾತಿ ಸೇರಿಕೊಳ್ಳುತ್ತದೆ. ದುರ್ಬಲ ವರ್ಗದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ಬಂದಾಗ ಮಾತ್ರ ನಮಗೆ ಸಿಕ್ಕ ಸ್ವಾತಂತ್ರ್ಯಕ್ಕೆ ಬೆಲೆ ಬರುತ್ತದೆ. ನೀವೆಲ್ಲರೂ ನಮ್ಮ ಸಂವಿಧಾನವನ್ನು ಮತ್ತು ಸಂವಿಧಾನ ಜಾರಿ ಸಭೆಯ ಚರ್ಚೆಯನ್ನು ತಪ್ಪದೇ ಓದಬೇಕು ಎಂದರು.

ಮಕ್ಕಳಿಗೆ ಅನ್ನಕ್ಕಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಬಂದು ನಿಂತ ತಾಯಂದಿರನ್ನು ನಾನು ಕಂಡಿದ್ದೆ. ಈ ಪರಿಸ್ಥಿತಿ ಹೋಗಬೇಕು ಎನ್ನುವ ಕಾರಣಕ್ಕೆ ನಾನು ಅನ್ನಭಾಗ್ಯ ಜಾರಿ ತಂದೆ, ಅನ್ನಕ್ಕಾಗಿ ಯಾರೂ ಯಾರನ್ನೂ ಬೇಡುವ ಅಗತ್ಯವಿಲ್ಲದ ಪರಿಸ್ಥಿತಿ ತಂದೆ. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಎನ್ನುವುದನ್ನು ಮರೆಯಬಾರದು. ಮೋದಿ ಮುಖ್ಯಮಂತ್ರಿ ಆಗಿದ್ದಾಗ ಏನೇನು ಹೇಳಿದ್ದರೋ ಅದಕ್ಕೆ ವಿರುದಗಧವಾಗಿ ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಯವರು ಮೈಸೂರಿಗೆ ಏನಾದ್ರೂ ಮಾಡಿದ್ರಾ? ಇಲ್ಲಿರುವ ಮಹಾರಾಣಿ ಕಾಲೇಜು, ಆಸ್ಪತ್ರೆ, ಜಯದೇವ ಆಸ್ಪತ್ರೆ ಸೇರಿ ಇಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೆಲ್ಲಾ ನಮ್ಮಿಂದ ಆಗಿದ್ದು. ನಾನು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರ್ಕಾರ ಮೈಸೂರಿನ ಅಭಿವೃದ್ಧಿ ಮಾಡಿದ್ದೇ ಹೊರತು ಬುರುಡೆ ಬಿಜೆಪಿ‌ ಮಾಡಿದ್ದೇನೂ ಇಲ್ಲ ಎಂದು ವಿವರಿಸಿದರು. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ನಮ್ಮ ಜೊತೆ ಒಂದೇ ವೇದಿಕೆಯಲ್ಲಿ‌ ಬಹಿರಂಗ ಚರ್ಚೆಗೆ ಬರಲಿ. ನಾನೇ ಬರುತ್ತೇನೆ. ಈ ಸವಾಲನ್ನು‌ ಬಿಜೆಪಿ‌ ಸ್ವೀಕರಿಸಲು ಸಿದ್ದವಿಲ್ಲ ಏಕೆ ಎಂದು ಪ್ರಶ್ನಿಸಿದರು. ಬಿಜೆಪಿ ಏನೂ ಕೆಲಸ ಮಾಡದೆ ಕೇವಲ ಬರೀ ಬುರುಡೆ ಬಿಡತ್ತೆ. ಬಿಜೆಪಿ ಯವರು ಕೆಲಸ ಮಾಡಿದ ಸಾಕ್ಷಿ ಗುಡ್ಡೆ ತೋರಿಸಿ ಎಂದರು.

Related Posts

Leave a Reply

Your email address will not be published. Required fields are marked *