ಡಿಸಿಎಂ @DKShivakumar ಅವರೇ, ಮೊದಲು ನಿಮ್ಮ ಸರ್ಕಾರದ ತೆರಿಗೆ ಲೂಟಿಯನ್ನು ನಿಲ್ಲಿಸಿ, ನಂತರ ಬೇರೆಯವರಿಗೆ ಬುದ್ಧಿ ಹೇಳಿ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆಗಳು ಅತ್ಯಂತ ಹಾಸ್ಯಾಸ್ಪದ ಮತ್ತು ವಿಪರ್ಯಾಸದಿಂದ ಕೂಡಿವೆ. ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವ ಮುನ್ನ, ತಮ್ಮದೇ @INCKarnataka ಸರ್ಕಾರ ಕನ್ನಡಿಗರ ಜೇಬಿಗೆ ಹೇಗೆ ಕತ್ತರಿ ಹಾಕುತ್ತಿದೆ ಎಂಬುದಕ್ಕೆ ಅವರು ಮೊದಲು ಉತ್ತರಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.
ಮೇ 2023 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ, ಸಿಎಂ @siddaramaiah ಮತ್ತು ಡಿಸಿಎಂ @DKShivakumar ಜೋಡಿ ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆದು ತಮ್ಮ “ಗ್ಯಾರಂಟಿ”ಗಳ ವೈಫಲ್ಯವನ್ನು ಮುಚ್ಚಿ ಹಾಕಲು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತಮ್ಮ ಪಾಲಿನ ಎಟಿಎಂ ಮಾಡಿಕೊಂಡಿದ್ದಾರೆ. ನಿಮ್ಮ ಕಾಂಗ್ರೆಸ್ ಸರ್ಕಾರದ ತೆರಿಗೆ ಲೂಟಿಯ ವರದಿ ಸ್ಪಷ್ಟವಾಗಿದೆ ಎಂದಿದ್ದಾರೆ.
ಜೂನ್ 2024 ರಲ್ಲಿ ಪೆಟ್ರೋಲ್ ಬೆಲೆಯನ್ನು ಸುಮಾರು ₹3 ಮತ್ತು ಡೀಸೆಲ್ ಬೆಲೆಯನ್ನು ₹3.5 ಹೆಚ್ಚಿಸಿದ ಕಾಂಗ್ರೆಸ್ ಸರ್ಕಾರ, ಏಪ್ರಿಲ್ 2025 ರಲ್ಲಿ ಮತ್ತೆ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ₹2 ರಷ್ಟು ಹೆಚ್ಚಿಸಿದೆ. ಇದರ ಒಟ್ಟು ಪರಿಣಾಮವೆಂದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕದಲ್ಲಿ ಡೀಸೆಲ್ ಬೆಲೆ ಬರೋಬ್ಬರಿ ₹5.5 ರಷ್ಟು ಹೆಚ್ಚಾಗಿದೆ. ಇದು ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತವಲ್ಲ, ಬದಲಿಗೆ ಕೇವಲ ರಾಜ್ಯ ಸರ್ಕಾರದ ತೆರಿಗೆ ದಾಹದಿಂದ ಆಗಿರುವ ಬೆಲೆ ಏರಿಕೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವ ಶಿವಕುಮಾರ್ ಅವರೇ, ರಾಜ್ಯದ ರೈತರು, ವಾಹನ ಸವಾರರು ಮತ್ತು ಜನಸಾಮಾನ್ಯರಿಗೆ ನಿಮ್ಮ ಸರ್ಕಾರ ನೀಡುತ್ತಿರುವ ಈ ಶಿಕ್ಷೆಗೆ ನಿಮ್ಮ ಬಳಿ ಉತ್ತರವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸುವ ಡಿ.ಕೆ. ಶಿವಕುಮಾರ್ ಅವರಿಗೆ ಅವರದೇ ಪಕ್ಷದ ಇತಿಹಾಸ ನೆನಪಿಲ್ಲವೆಂದು ತೋರುತ್ತದೆ. ಯುಪಿಎ ಅವಧಿಯಲ್ಲಿ ಸೋನಿಯಾ ಗಾಂಧಿ ಮತ್ತು ಮನ್ಮೋಹನ್ ಸಿಂಗ್ ಸರ್ಕಾರ 2005 ರಿಂದ 2010 ರವರೆಗೆ ₹1.34 ಲಕ್ಷ ಕೋಟಿ ಮೌಲ್ಯದ “ಆಯಿಲ್ ಬಾಂಡ್‌ಗಳನ್ನು” (Oil Bonds) ಬಿಡುಗಡೆ ಮಾಡಿತ್ತು. ಅಂದು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮಾಡಿದ ಆ ಸಾಲವನ್ನು ಇಂದು ಸನ್ಮಾನ್ಯ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ತೀರಿಸುತ್ತಿದೆ. ಇದುವರೆಗೆ ಕೇಂದ್ರ ಸರ್ಕಾರ ಅಸಲು ಮತ್ತು ಬಡ್ಡಿ ಸೇರಿ ₹1.5 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ನಿಮ್ಮ ಹಳೆಯ ಸಾಲ ತೀರಿಸಲು ಪಾವತಿಸಿದೆ. ಅಂದು ನೀವು ಮಾಡಿದ ಮೋಜಿನ ಬಿಲ್ ಅನ್ನು ಇಂದಿನ ತೆರಿಗೆದಾರರು ಪಾವತಿಸುವಂತಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಏಪ್ರಿಲ್ 2025 ರಲ್ಲಿ ಅಬಕಾರಿ ಸುಂಕವನ್ನು ಮಾರ್ಪಾಡು ಮಾಡಿದಾಗ, ಅದರ ಹೊರೆ ಜನಸಾಮಾನ್ಯರ ಮೇಲೆ ಬೀಳದಂತೆ ತೈಲ ಕಂಪನಿಗಳೇ ಭರಿಸುವಂತೆ ನೋಡಿಕೊಂಡಿತು. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತೆರಿಗೆ ಏರಿಸಿದಾಗಲೆಲ್ಲಾ ಅದರ ನೇರ ಹೊರೆ ಬಡವರ ಮೇಲೆ ಬೀಳುತ್ತಿದೆ ಎಂದಿದ್ದಾರೆ.
ಇಂದು ಮೋದಿ ಸರ್ಕಾರ ಕೇಂದ್ರ ತೆರಿಗೆಯನ್ನು ₹10 ರಷ್ಟು ಕಡಿತಗೊಳಿಸಿ ಜನರಿಗೆ ದೊಡ್ಡ ಮಟ್ಟದ ನೆರವು ನೀಡಿದೆ. ಆದರೆ ನೀವು ಕೇವಲ 10 ಪೈಸೆಯನ್ನೂ ಕಡಿಮೆ ಮಾಡುವ ಮನಸ್ಸು ಮಾಡಿಲ್ಲ! ನಿಮಗೆ ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇದ್ದರೆ, ಮೊದಲು ನೀವು ಏರಿಸಿರುವ ಈ ₹5.5 ದರವನ್ನು ವಾಪಸ್ ಪಡೆಯಿರಿ. ಕೇವಲ ಪತ್ರಿಕಾಗೋಷ್ಠಿ ನಡೆಸಿ ಸುಳ್ಳು ಹೇಳುವುದು ನಾಯಕತ್ವವಲ್ಲ. ಕರ್ನಾಟಕದ ಜನತೆಗೆ ನಿಮ್ಮ “ಹಿಟ್ ಅಂಡ್ ರನ್” ರಾಜಕೀಯ ಚೆನ್ನಾಗಿ ಅರ್ಥವಾಗಿದೆ ಎಂದು ತಿಳಿಸಿದ್ದಾರೆ.


