ಇನ್ಸ್ಟಾಗ್ರಾಂ ಸ್ನೇಹಿತನಿಗಾಗಿ ನಿದ್ರೆ ಇಂಜೆಕ್ಷನ್ ನೀಡಿ ತಂದೆ ತಾಯಿಯನ್ನು ನರ್ಸ್ ಯುವತಿ ಕೊಂದಿರುವ ಪ್ರಕರಣ ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ನಡೆದಿದೆ.
ಆರೋಪಿ ನಕ್ಕಲ ಸುರೇಖಾಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತಾಯಿ ಲಕ್ಷ್ಮಿ (54) ಮತ್ತು ತಂದೆ ದಶರತ್ (58) ಅವರಿಗೆ ನಿದ್ರೆ ಇಂಜೆಕ್ಷನ್ ಅಧಿಕ ಪ್ರಮಾಣದಲ್ಲಿ ನೀಡಿ ಸಾಯಿಸಿದ್ದಾಳೆ ಎನ್ನಲಾಗಿದೆ. ಸುರೇಖಾ ಸಂಗರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ.
ಸುರೇಖಾ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಆ ವ್ಯಕ್ತಿ ಬೇರೆ ಜಾತಿಗೆ ಸೇರಿದ್ದರಿಂದ ಪೋಷಕರು ಈ ಸಂಬಂಧವನ್ನು ವಿರೋಧಿಸಿದರು, ಇದೇ ವಿಚಾರಕ್ಕೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಹೀಗಾಗಿ ಅನುಮಾನ ಬರದಂತೆ ಪೋಷಕರನ್ನು ಕೊಲೆ ಮಾಡಿದ್ದಾಳೆಂದು ಪೊಲೀಸರು ತಿಳಿಸಿದ್ದಾಳೆ.
ಜನವರಿ 24ರಂದು ರಾತ್ರಿ ಮೈ-ಕೈ ನೋವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವಳು ಪೋಷಕರಿಗೆ ನಿದ್ದೆ ಬರುವ ಇಂಜೆಕ್ಷನ್‌ನ ಹೈ ಡೋಸ್ ನೀಡಿದ್ದಾಳೆ. ಪೋಷಕರು ಪ್ರಜ್ಞೆ ಕಳೆದುಕೊಂಡ ಬಳಿಕ ಸುರೇಖಾ ಸಹೋದರನಿಗೆ ಮಾಹಿತಿ ನೀಡಿದ್ದು, ತಂದೆ-ತಾಯಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ.
ಮನೆಯನ್ನು ಪರಿಶೀಲಿಸಿದಾಗ ಬಳಸಿದ ಸಿರಿಂಜ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿ ಪತ್ತೆಯಾಗಿದ್ದು, ಪೊಲೀಸರಿಗೆ ಅನುಮಾನವುಂಟಾಗಿದೆ. ತನಿಖೆಯಲ್ಲಿ ಸುರೇಖಾ ಕೃತ್ಯ ಬಯಲಾಗಿದೆ.


