ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಠಾಣೆ ಬಳಿ ಬೃಹತ್ ಮರ ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಆರ್‌ಟಿ ನಗರದ ಕೀರ್ತನಾ (23) ಮೃತ ಯುವತಿ.
ಕೀರ್ತನಾ ಅವರು ಆಚಾರ್ಯ ಕಾಲೇಜು ಮೈದಾನದಲ್ಲಿ ಸ್ಯಾಂಡಲ್ ವುಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯ ನೋಡಲು ಹೋಗಿದ್ದ ಕೀರ್ತನಾ ಸ್ನೇಹಿತೆ ಜತೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮರ ಉರುಳಿ ಬಿದ್ದು ಸ್ಥಳದಲ್ಲೇ ಅಸು ನೀಗಿದ್ದಾರೆ.
ಕ್ರಿಕೆಟ್ ಮ್ಯಾಚ್ ನೋಡಿಕೊಂಡು ವಾಪಸ್ ಮನೆಗೆ ಬರುತ್ತಿದ್ದಾಗ ಎರಡು ಬೈಕ್ ಮೇಲೆ ಮರದ ಕೊಂಬೆ ಬಿದ್ದಿದೆ. ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿದ್ದು ಆಕೆಯ ಸ್ನೇಹಿತೆ ಮತ್ತು ಮತ್ತೊಂದು ಬೈಕ್‌ನಲ್ಲಿದ್ದ ಭಾಸ್ಕರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಇಲ್ಲಿನ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಡಿಗೆ ಮನೆಯಲ್ಲಿ ವ್ಯಕ್ತಿಯ ಅರೆಬೆಂದ ಶವ ಪತ್ತೆ
ಕೇರಳದ ತ್ರಿಶೂರ್ನ ಬಾಡಿಗೆ ಮನೆಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಇದೊಂದು ಕೊಲೆ ಆಗಿರಬಹುದೆಂದು ಪೊಲೀಸರು ಶಂಕಸಿದ್ದಾರೆ. ಮೃತ ವ್ಯಕ್ತಿ ಸನ್ನಿ ಎಂದು ಹೇಳಲಾಗಿದೆ. ಸನ್ನಿ ಬೆಳಗ್ಗೆಯಿಂದ ಕಾಣಿಸಿರಲಿಲ್ಲ ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.
ಸನ್ನಿ ಈ ಹಿಂದೆ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆತನಿದ್ದ ಕೊಠಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಕಟ್ಟಡದ ನಿವಾಸಿಗಳು ಕುನ್ನಂಕುಲಂ ಪೊಲೀಸರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸತ್ಯ ಹೊರ ಬರಲಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ವಿವಾಹೇತರ ಸಂಬಂಧವನ್ನು ಪ್ರಶ್ನಿಸಿದ ಕಾರಣಕ್ಕೆ ಪತ್ನಿಯನ್ನು ಕೊಂದು ಆಕೆಯ ಶವವನ್ನು ಕೊಳಕ್ಕೆ ಎಸೆದ ಆರೋಪದ ಮೇಲೆ ಕೇರಳದ ಕುರವಿಲಂಗಡ ಬಳಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಯಾಮ್ ಜಾರ್ಜ್ ಪತ್ನಿಯ ಕತ್ತು ಹಿಸುಕಿ ಕೊಂದು ಶವವನ್ನು ಕಾರಿನಲ್ಲಿ ಇರಿಸಿಕೊಂಡು ಇಡುಕ್ಕಿ ಜಿಲ್ಲೆಯ ಉಡುಂಬನ್ನೂರ್ ಬಳಿಯ ಕೊಳದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಜ್ 15 ವರ್ಷಗಳಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದನು. ಎರಡು ಅಂತಸ್ತಿನ ಮನೆಯಲ್ಲಿ ಮೇಲೆ ಆತ ವಾಸವಾಗಿದ್ದರೆ, ಕೆಳಗಿನ ಮಹಡಿಯಲ್ಲಿ ಹೆಂಡತಿ ವಾಸವಿದ್ದರು. ಆತ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಪತ್ನಿ ಜೆಸ್ಸಿ (49) ಮೂವರು ಮಕ್ಕಳೊಂದಿಗೆ ಇದ್ದರು. ಮಕ್ಕಳು ವಿದೇಶಕ್ಕೆ ತೆರಳಿದ ನಂತರ ಜೆಸ್ಸಿ ಕಳೆದ 6 ತಿಂಗಳಿನಿಂದ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.