ಬೆಂಗಳೂರಿನಿಂದ ಸ್ನೇಹಿತೆಯ ಮದುವೆ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ರಂಜಿತಾ (27) ಮೃತ ಯುವತಿ, ಈಕೆ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿ. ಶುಕ್ರವಾರ ಈ ಘಟನೆ ನಡೆದಿದ್ದು, ಸಾವಿನ ಹಿಂದಿನ ನಿಖರ ಕಾರಣಗಳು ಇನ್ನೂ ಬಹಿರಂಗಗೊಂಡಿಲ್ಲ. ಪೊಲೀಸರು ಪ್ರಕರಣದಲ್ಲಿ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ರಂಜಿತಾ ಎಂಎಸ್ಸಿ ಪದವೀಧರರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಸ್ನೇಹಿತೆಯ ನಿಶ್ಚಿತಾರ್ಥಕ್ಕಾಗಿ ಮತ್ತೊಬ್ಬ ಸ್ನೇಹಿತೆ ರೇಖಾ ಅವರೊಂದಿಗೆ ಚಿಕ್ಕಮಗಳೂರಿಗೆ ಬಂದಿದ್ದರು. ಹಾಂದಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದರು. ಬೆಳಗ್ಗೆ ಸ್ನಾನಕ್ಕೆ ಹೋದಾಗ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಅಸು ನೀಗಿದ್ದಾರೆಂದು ರೇಖಾ ಪೊಲೀಸರಿಗೆ ದೂರು ನೀಡಿದ್ದಾರೆ. ರಂಜಿತಾ ಸ್ನಾನಕ್ಕೆ ಹೋದ ನಂತರ ಯಾವುದೇ ಸದ್ದು ಕೇಳದಿದ್ದಾಗ ಅನುಮಾನಗೊಂಡು ಬಾಗಿಲು ತೆರೆದು ನೋಡುವಾಗ ಅಲ್ಲಿ ರಂಜಿತಾ ಕುಸಿದು ಬಿದ್ದಿದ್ದರು ಎಂದು ರಂಜಿತಾ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಲವು ಅನುಮಾನ ವ್ಯಕ್ತವಾಗಿದ್ದು, ಬಾತ್‌ರೂಮ್‌ನಲ್ಲಿ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ರಂಜಿತಾ ಮೃತಪಟ್ಟಿರುವ ಶಂಕೆಯಿದೆ. ಅನಿಲ ಸೋರಿಕೆಯಿಂದಾಗಿ ಉಸಿರುಗಟ್ಟಿ ಸತ್ತಿರುವ ಸಾಧ್ಯತೆಯನ್ನು ಪೊಲೀಸರು ಪರಿಗಣಿಸಿದ್ದಾರೆ. ಹೃದಯಾಘಾತದಿಂದಲೂ ಸಾವು ಸಂಭವಿಸಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ, ಹೋಂಸ್ಟೇ ಮಾಲೀಕರನ್ನು ವಿಚಾರಣೆಗೆ ಕರೆದುಕೊಂಡು ಸಿಸಿಟಿವಿ ದೃಶ್ಯಗಳು ಮತ್ತು ಇತರ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಹೋಂಸ್ಟೇನಲ್ಲಿದ್ದ ಸಿಸಿಟಿವಿ ನಿಷ್ಕ್ರಿಯವಾಗಿವೆ, ಅದಕ್ಕೆ ಪರವಾನಗಿ ಕೂಡ ಇಲ್ಲದೆ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.


