ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಬ್ಬರು ಯುವತಿಯರೊಂದಿಗೆ ಸಂಬಂಧ ಹೊಂದಿದ್ದ ಯುವಕನೊಬ್ಬ ಒಬ್ಬಾಕೆಯ ಮಾತು ಕೇಳಿ ತನ್ನ ಲಿವ್-ಇನ್ ಸಂಗಾತಿಯನ್ನು ಕೊಲೆ ಮಾಡಿದ್ದಾನೆ. ಎರಡನೇ ಯುವತಿ ಆತ ಮತ್ತು ಆತನ ಮೊದಲ ಗೆಳತಿ ನಡುವಿನ ಸಂಬಂಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಆಕೆಯನ್ನು ಕೊಲೆ ಮಾಡಿದರೆ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದು ಹೇಳಿದ್ದನ್ನು ಕೇಳಿ ಹತ್ಯೆ ಮಾಡಿದ್ದಾನೆ.
ಸ್ನೇಹಿತನ ಸಹಾಯದಿಂದ ಕತ್ತು ಹಿಸುಕಿ ಕೊಂದು ಶವವನ್ನು ಸೂಟ್ಕೇಸ್ ಒಳಗಿಟ್ಟು, ಯಮುನಾ ನದಿಗೆ ಎಸೆದಿದ್ದಾನೆ. ಎರಡು ತಿಂಗಳ ತನಿಖೆಯ ನಂತರ ಪ್ರಕರಣದ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿ ದೀಪೇಂದ್ರ ನಾಥ್ ಚೌಧರಿ ಅವರ ಪ್ರಕಾರ, ಆಗಸ್ಟ್‌ನಲ್ಲಿ ಆಕಾಂಕ್ಷಾ ನಾಪತ್ತೆಯಾಗಿದ್ದಾರೆ ಎಂದು ಅವರ ತಾಯಿ ದೂರು ನೀಡಿದ್ದರು. ಬಾರಾದಲ್ಲಿನ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆಕಾಂಕ್ಷ ಸೋಷಿಯಲ್ ಮೀಡಿಯಾ ಮೂಲಕ ಆರೋಪಿಯನ್ನು ಭೇಟಿಯಾಗಿದ್ದಳು. ಸ್ನೇಹ ಸಂಬಂಧವಾಗಿ ಇಬ್ಬರೂ ಹನುಮಂತ್ ವಿಹಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.
ಆರೋಪಿಯುನು ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದು ಆಕಾಂಕ್ಷಾಗೆ ತಿಳಿದಾಗ, ಅವರ ನಡುವೆ ಜಗಳಗಳು ನಡೆಯುತ್ತಿದ್ದವು. ರೆಸ್ಟೋರೆಂಟ್‌ನಲ್ಲಿ ನಡೆದ ಜಗಳ ಮನೆಗೂ ತಲುಪಿ ಕೋಪದ ಭರದಲ್ಲಿ ಅವನು ಆಕಾಂಕ್ಷಾಳನ್ನು ಹೊಡೆದು ನಂತರ ಕತ್ತು ಹಿಸುಕಿ ಸಾಯಿಸಿದ್ದ. ಸ್ನೇಹಿತನಿಗೆ ಕರೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ಇರಿ, ಬೈಕ್ನಲ್ಲಿ ಚಿಲ್ಲಾ ಸೇತುವೆಗೆ ಒಯ್ದು ಯಮುನಾ ನದಿಗೆ ಎಸೆದರು. ಆರೋಪಿಗಳ ಮೊಬೈಲ್ ಲೊಕೇಷನ್ ಮತ್ತು ಕರೆ ದಾಖಲೆಗಳು ಆರೋಪಿಗಳ ಪತ್ತೆಗೆ ನೆರವಾಗಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.